ಬೆಂಗಳೂರು: ಮನೆಯ ಮುಂದೆ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ ವೃದ್ಧ ವ್ಯಕ್ತಿಗೆ ಚಾಕು ಇರಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.
ಚಾಕು ಇರಿತಕ್ಕೊಳಗಾದ ವ್ಯಕ್ತಿಯನ್ನು ವಿನಾಯಕ ಲೇಔಟ್ ನಿವಾಸಿ ಹಾಗೂ ನಿವೃತ್ತ ವಕೀಲ ದಳಪತಿ (70) ಎಂದು ಗುರುತಿಸಲಾಗಿದೆ. ದಳಪತಿ ಅವರು ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಳಿಕ ಪರಾರಿಯಾಗಿದ್ದ ನಾಗರಬಾವಿ 2ನೇ ಹಂತದ ನಿವಾಸಿ ರಾಘವೇಂದ್ರ ಎಂಬಾತನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಮ್ಮ ಮನೆಯ ಮುಂದೆ ಕಾರು ನಿಲ್ಲಿದ್ದನ್ನು ದಳಪತಿಯವರು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕುಪಿತಗೊಂಡ ರಾಘವೇಂದ್ರ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಗಾಯಗೊಂಡಿದ್ದ ದಳಪತಿಯನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ದಳಪತಿಯವರ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Advertisement