ಬೆಂಗಳೂರು: ಬೆಂಗಳೂರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ತಂದೆಯೋರ್ವ ತನ್ನ 14 ವರ್ಷದ ಮಗನನ್ನೇ ಕೊಂದು ಹಾಕಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಕಾಶಿ ನಗರದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಬಾಲಕನನ್ನು 14 ವರ್ಷದ ತೇಜಸ್ ಎಂದು ಗುರುತಿಸಲಾಗಿದ್ದು, ಹತ್ಯೆ ಮಾಡಿದ ತಂದೆಯನ್ನು ರವಿಕುಮಾರ್ ಎಂದು ಗುರುತಿಸಲಾಗಿದೆ.
ಮೊಬೈಲ್ ವಿಚಾರಕ್ಕೆ ಜಗಳ
ಮೂಲಗಳ ಪ್ರಕಾರ, ತೇಜಸ್ ಮತ್ತು ರವಿಕುಮಾರ್ ನಡುವೆ ಮೊಬೈಲ್ ವಿಚಾರಕ್ಕೆ ಜಗಳವಾಗಿದ್ದು, ಮೊಬೈಲ್ ಕೊಡಿಸುವಂತೆ ತೇಜಸ್ ಹಠ ಮಾಡಿದ ಎಂದು ಕೋಪಗೊಂಡ ತಂದೆ ರವಿಕುಮಾರ್ ಆತನಿಗೆ ಮನಸೋ ಇಚ್ಛ ಥಳಿಸಿದ್ದಾನೆ. ಸರಿಯಾಗಿ ಓದಲು ಆಗಲ್ಲ, ಶಾಲೆಗೆ ಹೊಗಲ್ಲ ಮೊಬೈಲ್ ಅಂತ ಗಲಾಟೆ ಶುರು ಮಾಡಿದ್ದಾನೆ.
ಇದಾದ ಬಳಿಕ ಗಲಾಟೆ ವಿಕೋಪಕ್ಕೆ ತೆರಳಿದ್ದು, ಕುಡಿದ ಅಮಲಿನಲ್ಲಿದ್ದ ರವಿಕುಮಾರ್ ಮಗನನ್ನು ಗೋಡೆಗೆ ತಳ್ಳಿದ್ದಾನೆ. ಈ ವೇಳೆ ಮಗ ತೇಜಸ್‌ಗೆ ಬಲವಾಗಿ ಪೆಟ್ಟಾಗಿದೆ. ಅದಾದ ಬಳಿಕ ಪೋಷಕರು ಮಗನನ್ನು ಆಸ್ಪತ್ರಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ತೇಜಸ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇ ಔಟ್ ಪೊಲೀಸರು ಭೇಟಿ ನೀಡಿ ಘಟನಾ ಸಂಬಂಧ ಪರಿಶೀಲನೆ ನಡೆಸಿದ್ದಾರೆ. ರವಿಕುಮಾರ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement