ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ನೆರವಿನಿಂದ ಶ್ಯೂರಿಟಿ ಪಡೆದು ಬಿಡುಗಡೆಯಾಗಿದ್ದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಸುರೇಶ್ ಇದೀಗ ಮತ್ತೆ ಜೋಡಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ.
ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, 'ಈ ಹಿಂದೆ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದ ಸುರೇಶ್ ಮತ್ತೆರಡು ಕೊಲೆ ಮಾಡಿ ಮತ್ತೆ ಜೈಲುಪಾಲಾಗಿದ್ದಾನೆ. ನವೆಂಬರ್ 8ರಂದು ಬೆಂಗಳೂರಿನ ಹೊರವಲಯದ ಬಾಗಲೂರಿನಲ್ಲಿ ಜೋಡಿ ಕೊಲೆ ನಡೆದಿದೆ.
ಎಸ್ಆರ್ಎಸ್ ಟ್ರಾವೆಲ್ಸ್ ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಕೊಲೆಯಾಗಿದ್ದು, ಈ ಕೊಲೆಗಳನ್ನು ಸುರೇಶ್ ಮಾಡಿದ್ದಾನೆ ಎಂದು ಹೇಳಲಾಗಿದೆ.
ಕೊಲೆಗೆ ಕಾರಣವೇನು?
ಮೂಲಗಳ ಪ್ರಕಾರ ಜೈಲಿಂದ ಬಿಡುಗಡೆ ಆದ ಬಳಿಕ ಸುರೇಶ್ ಬದಲಾಗಿದ್ದ. ಮಾರ್ಕೆಟ್ನಲ್ಲಿ ಕೊತ್ತುಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಾ ಇದ್ದ. ಸುರೇಶ್ ತನ್ನ ಸಂಬಂಧಿಯಿಂದ ಬಾಗಲೂರಿನ ಶೆಡ್ನಲ್ಲಿ ಕೆಲಸ ಪಡೆದುಕೊಂಡಿದ್ದ. ಪ್ರಸ್ತುತ ಕೊಲೆಯಾಗಿರುವ ನಾಗೇಶ್ ಮತ್ತು ಮಂಜುನಾಥ್, ಸುರೇಶ್ ಗೆ ಅಪಮಾನಿಸಿದ್ದರಂತೆ.
ಗುಜರಿ ಮಾರಾಟ ಮಾಡುವ ವಿಚಾರಕ್ಕೆ ನಡೆದ ಕಿರಿಕ್ ಬಳಿಕ ತಾರಕ್ಕೇರಿದೆ. ಈ ವೇಳೆ ನಾಗೇಶ್ ಮತ್ತು ಮಂಜುನಾಥ್ ‘ನೀನು ಕಳ್ಳ, ಕೊಲೆಗಾರ’ ಎಂದು ಪದೇ ಪದೇ ಸುರೇಶ್ ನನ್ನು ಹೀಯಾಳಿಸಿದ್ದರು. ಇದರಿಂದ ಸಿಟ್ಟಾದ ಸುರೇಶ್ ಕೊಲೆಗೈದಿದ್ದಾನೆ ಎಂದು ಹೇಳಲಾಗಿದೆ. ಆ ಮೂಲಕ ಸುರೇಶ್ ಮತ್ತೆ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ.
ಈ ಹಿಂದೆ ನಟ ದುನಿಯಾ ವಿಜಯ್ ಅವರು ಜಾಮೀನು ಹಣ ನೀಡಿ ಸುರೇಶ್ ಅನ್ನು ಜೈಲಿನಿಂದ ಹೊರಗೆ ತಂದಿದ್ದರು. ಆದರೆ, ಸುರೇಶ್ ಮತ್ತೆ ಅಪರಾಧ ಮಾಡಿ ಜೈಲು ಸೇರಿದ್ದಾನೆ.
ಯಾರು ಈ ಸುರೇಶ್?
ಸುರೇಶ್ ಕೊಲೆ ಹಾಗೂ ರೇಪ್ ಕೇಸ್ನಲ್ಲಿ 10 ವರ್ಷ ಶಿಕ್ಷೆ ಅನುಭವಿಸಿದ್ದ. ಈತನಿಗೆ ಶ್ಯೂರಿಟಿ ಹಣ ನೀಡಿ ಹೊರಕ್ಕೆ ಕರೆತರಲು ಯಾರೂ ಇರಲಿಲ್ಲ. ಈ ಸಮಯದಲ್ಲಿ ಒಂದಷ್ಟು ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ದುನಿಯಾ ವಿಜಯ್ ಶ್ಯೂರಿಟಿ ಹಣ ಕೊಟ್ಟಿದ್ದರು. ಈ ವೇಳೆ ಸುರೇಶ್ಗೂ ಕೂಡ ದುನಿಯಾ ವಿಜಿ ಮೂರು ಲಕ್ಷ ರೂಪಾಯಿ ಶ್ಯೂರಿಟಿ ಹಣ ನೀಡಿದ್ದರು.
ಈ ಮೂಲಕ ಸುರೇಶ್ನ ಹೊರ ತಂದಿದ್ದರು. ಆದರೆ, ಈಗ ದುನಿಯಾ ವಿಜಯ್ ಅವರ ಸದಾಶಯವನ್ನು ಸುರೇಶ್ ವ್ಯರ್ಥ ಮಾಡಿದ್ದಾನೆ. ಅಲ್ಲದೆ ಇನ್ಮುಂದೆ ದುನಿಯಾ ವಿಜಯ್ ಅವರು ಯಾರನ್ನಾದರೂ ಜೈಲಿನಿಂದ ಬಿಡಿಸಬೇಕು ಎಂದರೆ ಪದೇ ಪದೇ ವಿಚಾರ ಮಾಡುವಂತೆ ಮಾಡಿದ್ದಾನೆ.
Advertisement