ಬೆಂಗಳೂರು: ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಬೆಂಬಲಿಗನೆಂದು ಆರೋಪಿಸಲಾದ "ಮೋಟು ಡಾಕ್ಟರ್" ಎಂದು ಕರೆಯಲ್ಪಡುವ ಡಾ ಸಬೀಲ್ ಅಹ್ಮದ್‌ಗೆ ಕರ್ನಾಟಕ ಹೈಕೋರ್ಟ್ 10,000 ರೂ. ದಂಡ ವಿಧಿಸಿದೆ.
ಬೆಂಗಳೂರಿನಲ್ಲಿ ವಿಚಾರಣೆಗೆ ಹಾಜರಾಗಲು ಕೇರಳದ ಸಾಕ್ಷಿದಾರರೊಬ್ಬರಿಗೆ ಪ್ರಯಾಣ ಮತ್ತು ಇತರ ಭತ್ಯೆಗಳಿಗಾಗಿ 20,650 ರೂ. ಪಾವತಿಸುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅವರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಈ ದಂಡವನ್ನು ವಿಧಿಸಿದೆ.
ಅರ್ಜಿದಾರರು ವಿಚಾರಣೆಯನ್ನು ವಿಳಂಬಗೊಳಿಸಲು ಇಂತಹ ಅರ್ಜಿ ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಪ್ರಾಸಿಕ್ಯೂಷನ್ ವಾದ ಸತ್ಯವಾಗಿದೆ ಎಂಬುದನ್ನು ಪರಿಗಣಿಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತು.
ಅರ್ಜಿದಾರರು ರಿಯಾದ್‌ನಲ್ಲಿ ಲಷ್ಕರ್-ಎ-ತೊಯ್ಬಾ ಕಾರ್ಯಕ್ರಮ ಆಯೋಜನೆಗೆ ಹಣವನ್ನು ಸಂಗ್ರಹಿಸಲು ಮತ್ತು ಹಣಕಾಸು ನೆರವು ಒದಗಿಸಲು ಅರ್ಜಿದಾರರು ಆರೋಪಿಯಾಗಿದ್ದಾರೆ. ಈ ಕಾರ್ಯಕ್ರಮಗಳ ವೇಳೆಯಲ್ಲಿ ಪಾಕಿಸ್ತಾನದ ಭಾಷಣಕಾರರು ನೆರೆದಿದ್ದವರನ್ನುದ್ದೇಶಿಸಿ ಮಾತನಾಡುತ್ತಾರೆ. ಅಲ್ಲದೇ ಎಲ್ಇಟಿಗೆ ಸಂಭಾವ್ಯ ನೇಮಕಾತಿಯನ್ನು ಗುರುತಿಸುತ್ತಾರೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.
ಅರ್ಜಿದಾರರು ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದಲ್ಲಿ ಬೇರೂರಿರುವ ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿಯ ಬೆಂಬಲಿಗರಾಗಿದ್ದು, ಭಾರತದಲ್ಲಿ ಸಹಚರರನ್ನು ಹೊಂದಿದ್ದರು ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿದರು.
ಆರೋಪಿಗಳು ಮತ್ತು ಸಹ-ಆರೋಪಿಗಳ ವಿರುದ್ಧದ ಆರೋಪಗಳು ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967 ರ ನಿಬಂಧನೆಗಳ ಅಡಿಯಲ್ಲಿ ಸಲ್ಲಿಸಲಾದ NIA ಚಾರ್ಜ್‌ಶೀಟ್ ಅನ್ನು ಆಧರಿಸಿವೆ. ವಿಚಾರಣಾ ನ್ಯಾಯಾಲಯ ಫೆಬ್ರವರಿ 15, 2024 ರಂದು ಕೇರಳದ ತಿರುವನಂತಪುರಂ ವಿಜ್ಞಾನಿಯೊಬ್ಬರ ಹೇಳಿಕೆ ಆಧಾರದ ಮೇಲೆ ಆರೋಪ ದಾಖಲಿಸಿತ್ತು.
ಅಂದು, ಆರೋಪಿಗಳು ಮಾರ್ಚ್ 19, 2024ಕ್ಕೆ ವಿಚಾರಣೆ ಮುಂದೂಡಬೇಕು ಮರು ಪರಿಶೀಲನೆಗೆ ಹೆಚ್ಚುವರಿ ಸಮಯವನ್ನು ಕೋರಿದರು. ಆರೋಪಿಗಳು ಸಾಕ್ಷಿಯ ಪ್ರಯಾಣ ಮತ್ತು ಸಂಬಂಧಿತ ವೆಚ್ಚಗಳಿಗಾಗಿ ರೂ 20,650 ಪಾವತಿಸಬೇಕೆಂಬ ಷರತ್ತಿನ ಮೇಲೆ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಏಪ್ರಿಲ್ 5, 2024 ಕ್ಕೆ ಮುಂದೂಡಿತ್ತು.
ಆರೋಪಿಗಳು ಆ ಮೊತ್ತವನ್ನು ಕಡಿಮೆ ಮಾಡಲು ಅರ್ಜಿ ಸಲ್ಲಿಸಿದರು. ಅದನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ತರುವಾಯ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಒಂದು ವರ್ಷ ವಿಳಂಬವಾಗಿದೆ ಎಂಬುದನ್ನು ಗಮನಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಅರ್ಜಿದಾರರು ವಿಚಾರಣೆಯನ್ನು ಸ್ಥಗಿತಗೊಳಿಸಲು ಕಾನೂನು ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ತೀರ್ಮಾನಿಸಿ, ಅಗತ್ಯ ಮೊತ್ತವನ್ನು ಪಾವತಿಸಲು ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು.
Advertisement