ನಮ್ಮ ಮೆಟ್ರೋ ಪ್ರಯಾಣಿಕರಿಗೆ BMRCL ​ಶಾಕ್: ಟಿಕೆಟ್​​ ದರ ಶೇ.15-20 ರಷ್ಟು ಹೆಚ್ಚಳಕ್ಕೆ ಚಿಂತನೆ, ಸಮಿತಿ ರಚನೆ

ಟಿಕೆಟ್​​ ದರ ನಿಗದಿಗೆ ಈಗಾಗಲೇ ಬಿಎಂಆರ್ಸಿಎಲ್ ಸಮಿತಿ ರಚಿಸಿದ್ದು, ವರದಿ ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಿದೆ.
Namma Metro
ನಮ್ಮ ಮೆಟ್ರೋ online desk
Updated on

ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಹೌದು, ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಲು ಬಿಎಂಆರ್ಸಿಎಲ್ ಮುಂದಾಗಿದ್ದು, ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಟಿಕೆಟ್​​ ದರ ನಿಗದಿಗೆ ಈಗಾಗಲೇ ಬಿಎಂಆರ್ಸಿಎಲ್ ಸಮಿತಿ ರಚಿಸಿದ್ದು, ವರದಿ ಸಲ್ಲಿಸಲು 90 ದಿನಗಳ ಕಾಲಾವಕಾಶ ನೀಡಿದೆ.

ಸಮಿತಿಯಲ್ಲಿ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್ ಥರಾಣಿ ಅವರು ಅಧ್ಯಕ್ಷರಾಗಿದ್ದರೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತ್ಯೇಂದ್ರ ಪಾಲ್ ಸಿಂಗ್ ಮತ್ತು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ ವಿ ರಮಣ ರೆಡ್ಡಿ ಸದಸ್ಯರಾಗಿ ನೇಮಿಸಲಾಗಿದೆ.

ಪ್ರಸ್ತುತ, ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರವು 10 ರೂ. ಮತ್ತು ಗರಿಷ್ಠ 60 ರೂ. ಇದೆ. ಗರಿಷ್ಠ ದರವು ನೇರಳೆ ಮತ್ತು ಹಸಿರು ಮಾರ್ಗಗಳೆರಡರಲ್ಲೂ ದೀರ್ಘ ಪ್ರಯಾಣಕ್ಕೆ ಅನ್ವಯಿಸುತ್ತದೆ. ವೈಟ್‌ಫೀಲ್ಡ್-ಚಲ್ಲಘಟ್ಟ ನಡುವಣ ದೂರ 43.49 ಕಿಮೀ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್-ನಾಗಸಂದ್ರ ನಡುವಣ ದೂರ 30.32 ಕಿಮೀ ಇದ್ದರೂ ಅವುಗಳ ದರ ಒಂದೇ (60 ರೂ) ಆಗಿದೆ. ಸ್ಮಾರ್ಟ್‌ಕಾರ್ಡ್‌ಗಳು ಮತ್ತು ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಬಳಸುವ ಪ್ರಯಾಣಿಕರಿಗೆ ಶೇಕಡಾ 5 ರಷ್ಟು ರಿಯಾಯಿತಿ ಸಿಗುತ್ತದೆ.

Namma Metro
ಬೆಂಗಳೂರು-ತುಮಕೂರು ರಸ್ತೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ ಶೀಘ್ರದಲ್ಲೇ ಆರಂಭ..!

ಕಳೆದ ಮೂರು ವರ್ಷಗಳಿಂದ ಪ್ರಯಾಣ ದರದಲ್ಲಿ ಪರಿಷ್ಕರಣೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ಇದೀಗ ಅಂತಿಮವಾಗಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಕಾರ್ಯಾಚರಣೆಯ ವೆಚ್ಚ, ಅಂತರರಾಷ್ಟ್ರೀಯ ಏಜೆನ್ಸಿಗಳಿಗೆ ವಾರ್ಷಿಕವಾಗಿ ಪಾವತಿಸುವ ಬಡ್ಡಿ, ಮರುಪಾವತಿಸುತ್ತಿರುವ ಸಾಲದ ಮೊತ್ತ ಮತ್ತು ಇತರ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ದರ ನಿಗದಿ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವೇತನ ಹೆಚ್ಚಳ ಮತ್ತು ನಿರ್ವಹಣಾ ವೆಚ್ಚದ ಹೆಚ್ಚಳದ ಬಗ್ಗೆಯೂ ನಾವು ಗಮನ ಹರಿಸಬೇಕಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಈ ನಡುವೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬುಧವಾರ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ‘ಮೆಟ್ರೊ ರೈಲು ದರ ನಿಗದಿ ಸಮಿತಿ’ಗೆ ಅಕ್ಟೋಬರ್ 21 ರೊಳಗೆ ಸಲಹೆಗಳನ್ನು ನೀಡುವಂತೆ ನಾಗರಿಕರನ್ನು ಕೋರಿದೆ.

ಸಾರ್ವಜನಿಕರು ತಮ್ಮ ಸಲಹೆಗಳನ್ನು ಇಮೇಲ್‌ ಮೂಲಕ ffc@bmrc.co.in ಗೆ ಕಳುಹಿಸಬಹುದು ಅಥವಾ ಬಿಎಂಆರ್‌ಸಿಎಲ್‌ ಕೇಂದ್ರ ಕಚೇರಿಗೆ ಅಂಚೆ ಮೂಲಕ ಅಕ್ಟೋಬರ್‌ 21ರ ಒಳಗೆ ಕಳುಹಿಸಬಹುದು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com