
ಬೆಂಗಳೂರು: ಶನಿವಾರ ಮತ್ತು ಭಾನುವಾರ ಸುರಿದ ಭಾರೀ ಮಳೆಗೆ ಯಲಹಂಕ ವಲಯದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ಮಹಾಲಕ್ಷ್ಮಿ ಲೇಔಟ್‌ನಲ್ಲಿ 63 ಮನೆಗಳಿಗೆ ನೀರು ನುಗ್ಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ವಲಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್ ಗಿರಿನಾಥ್, ಮಳೆಯಿಂದ ನಗರದಲ್ಲಿ ಸುಮಾರು 800 ಗುಂಡಿಗಳು ಕಾಣಿಸಿಕೊಂಡಿದ್ದು, ಬಿಬಿಎಂಪಿ ಶೀಘ್ರದಲ್ಲೇ ಅವುಗಳನ್ನು ಸರಿಪಡಿಸಲಿದೆ. ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಕಡಿಮೆ ಮಳೆಯಾಗಿದ್ದರೂ, ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಪಶ್ಚಿಮ ವಲಯದ ಹಂಪಿ ನಗರದಲ್ಲಿ ಶನಿವಾರ ಸಂಜೆ ಎರಡೂವರೆ ಗಂಟೆಯಲ್ಲಿ ಸಮಾರು 108. 2 ಮಿ.ಮೀ ಮಳೆ ದಾಖಲಾಗಿದೆ. ಅದೇ ರೀತಿ ಸುತ್ತಮುತ್ತಲಿನ ನಂದಿನಿ ಲೇಔಟ್, ಯಲಹಂಕ ಮತ್ತಿತರ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ ಎಂದು ಅವರು ಹೇಳಿದರು.
ಕೇಂದ್ರೀಯ ವಿಹಾರದಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯವು ಯಲಹಂಕ ಕೆರೆಯ ಹೊರಗೆ ಬಂದಿದೆ. ಸಂಕೀರ್ಣವನ್ನು ಪ್ರವಾಹದಿಂದ ರಕ್ಷಿಸುವ ಗೋಡೆಯು ಕುಸಿದು ಬಿದ್ದಿದ್ದರಿಂದ ಜಲಾವೃತವಾಯಿತು. ನೀರನ್ನು ಪಂಪ್ ಮಾಡಲು ನಾವು ಜನರನ್ನು ನಿಯೋಜಿಸಿದ್ದೇವೆ. ಪಶ್ಚಿಮ ವಲಯದಲ್ಲಿ ಒಂದು ಗಂಟೆ ಸುರಿದ ಭಾರಿ ಮಳೆಗೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ 63 ಮನೆಗಳಿಗೆ ನೀರು ನುಗ್ಗಿದೆ. ಹಾನಿಗೀಡಾದ ಮನೆಗಳಿಗೆ ಪರಿಹಾರ ನೀಡುವಂತೆ ವಲಯ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.
ಬಿನ್ನಿ ಪೇಟೆಯಲ್ಲಿ ಖಾಸಗಿ ಆಸ್ತಿಯ ಮೇಲೆ ಗೋಡೆ ಕುಸಿದಿದ್ದು, ಯಾವುದೇ ಅಪಾ ಸಂಭವಿಸಿಲ್ಲ ಎಂದು ತುಷಾರ್ ತಿಳಿಸಿದರು. ಪಾಲಿಕೆಯವರು ಮಳೆಗೆ ನೆಲಕ್ಕುರುಳಿದ್ದ ಸುಮಾರು 20 ಮರಗಳನ್ನು ತೆರವುಗೊಳಿಸಿದ್ದಾರೆ.
ಯಲಹಂಕದ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಲು ಒತ್ತುವರಿ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರೀಯ ವಿಹಾರ ಕೆರೆ ದಂಡೆಯ ಕೆಳಗೆ ಇದೆ. “ನಾವು ಮಳೆನೀರು ಚರಂಡಿಯನ್ನು ನಿರ್ಮಿಸಿದ್ದರೂ, ಭಾರೀ ಮಳೆಯ ಸಮಯದಲ್ಲಿ, ಪ್ರದೇಶವು ಪ್ರವಾಹಕ್ಕೆ ಗುರಿಯಾಗುತ್ತದೆ. ಈ ಪ್ರದೇಶದಲ್ಲಿ ಅತಿಕ್ರಮಣವಾಗಿದೆಯೇ ಎಂದು ಹೇಳಲು ಸಾಧ್ಯವಿಲ್ಲ. ಹಿಂದೆ ನೀರಾವರಿ ಕಾಲುವೆ ಹೆಚ್ಚು ಅಗಲವಿಲ್ಲ. ಹೀಗಾಗಿ ಯಾವಾಗಲೂ ಸಮಸ್ಯೆಗಳಿರುತ್ತವೆ, ಆದರೆ ನಾವು ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ಇನ್ನಾದರೂ ಕಾಲುವೆ ಮಾಡಬೇಕೇ ಎಂದು ನೋಡುತ್ತೇವೆ’ ಎಂದು ಗಿರಿನಾಥ್ ಹೇಳಿದರು.
ಜಲಾವೃತಗೊಂಡ ಮನೆಗಳ ಪರಿಹಾರದ ಕುರಿತು ಮಾತನಾಡಿದ ಅವರು, ಪಾಲಿಕೆ ತನ್ನ ನಿಧಿಯಿಂದ ನೇರ ಲಾಭ ವರ್ಗಾವಣೆಯಡಿ ಪ್ರತಿ ಮನೆಗೆ 10 ಸಾವಿರ ರೂ. ಪರಿಹಾರ ಧನ ನೀಡುವುದಾಗಿ ತಿಳಿಸಿದರು.
Advertisement