
ಬೆಂಗಳೂರು: ಕಾರಿನ ಗಾಜು ಒಡೆದು ಲ್ಯಾಪ್'ಟಾಪ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದು, 12 ಲಕ್ಷ ಮೌಲ್ಯದ 17 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಸೇಲಂ ಮೂಲದ 35 ವರ್ಷದ ಸದಾನಾಯ್ಡು ಬಂಧಿತ ಆರೋಪಿ. ಈತನ ಅಣ್ಣ ಗಂಗೇಶ್ ಗಾಗಿ ಹುಡುಕಾಟ ಮುಂದುವರೆದಿದೆ.
ಆರೋಪಿಗಳಿಬ್ಬರೂ ಅಣ್ಣ-ತಮ್ಮಂದಿರಾಗಿದ್ದು, ವಾರಕ್ಕೊಮ್ಮೆ ನಗರಕ್ಕೆ ಬಂದು ಅರ್ಧಗಂಟೆಯಲ್ಲಿ ಕೆಲಸ ಮುಗಿಸಿ ಮತ್ತೆ ಸ್ಕೂಟಿಯಲ್ಲಿ ವಾಪಸ್ ಹೋಗುತ್ತಿದ್ದರು. ಇಬ್ಬರೂ ನಗರದ ಜಯನಗರ, ಜೆಪಿ ನಗರ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಕೈಚಳಕ ತೋರಿಸುತ್ತಿದ್ದರು.
ಆ.31ರಂದು ಜಯನಗರ 5ನೇ ಬ್ಲಾಕ್‌ನ ಹೊಟೇಲ್ ಬಳಿ ನಿಲ್ಲಿಸಿದ್ದ ಕಾರಿನಿಂದ ಲ್ಯಾಪ್‌ಟಾಪ್ ಕಳವು ಮಾಡಿದ್ದ ಆರೋಪಿಗಳ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಇದರಂತೆ ಪ್ರಕರಣದ ತನಿಖೆಯಂತೆ ಸೆ.12 ಆರೋಪಿ ಸದಾನಾಯ್ಡುನನ್ನು ಸೇಲಂನಲ್ಲಿ ಬಂಧಿಸಿ, ನಗರಕ್ಕೆ ಕರೆತಂದು 9 ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದೀಗ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement