ಮಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು 1.12 ಕೋಟಿ ರೂ.ವಂಚಿಸಿದ್ದು, ಈ ಸಂಬಂಧ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹ್ಯಾಪನ್ ಎನ್ನುವ ಡೇಟಿಂಗ್ ಆಪ್‌ನಲ್ಲಿ ಮೊದಲು ದೂರುದಾರರಿಗೆ ಲೀನಾ ಜೋಸ್ ಎಂಬುವರ ಜೊತೆ ಸಂಪರ್ಕವಾಗಿದ್ದು, ಬಳಿಕ ಟೆಲಿಗ್ರಾಂ ಮೂಲಕ ಚಾಟ್ ಮಾಡತೊಡಗಿದರು. ಆಗ ಲೀನಾ ಆಡ್ಮಿರಲ್ ಮಾರ್ಕೆಟ್ ಫೋರೆಕ್ಸ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಲು ತಿಳಿಸಿದ್ದು, ಅದರಂತೆ ದೂರುದಾರರು ಅಡ್ಮಿರಲ್ ಮಾರ್ಕೆಟ್ ಫೋರೆಕ್ಸ್ ಟ್ರೇಡಿಂಗ್ ನಕಲಿ ವೇವ್‌ಜಿಪಿಟೆಕ್ಸಾ ಎಂಬ ಆಪ್ ಡೌನ್‌ಲೋಡ್ ಮಾಡಿ ಲಾಗಿನ್ ಆದರು. ಬಳಿಕ ಜುಲೈ 3 ರಂದು, ದೂರುದಾರರು 50 ಸಾವಿರ ರೂ. ಮೊತ್ತವನ್ನು ನೆಫ್ಟ್ ಮೂಲಕ ವರ್ಗಾಯಿಸಿದರು.
ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂಬ ಆಮಿಷಕ್ಕೊಳಗಾದ ದೂರುದಾರರು ಜುಲೈ 3ರಿಂದ 23ರ ವರೆಗೆ 10 ಲಕ್ಷ ರೂ. ಮೊತ್ತವನ್ನು ಆರೋಪಿಗಳು ಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದರು. ನಂತರ ವೇವ್‌ಜಿಪಿಟೆಕ್ಸಾ ಆಪ್ ಖಾತೆಯಲ್ಲಿ 80 ಲಕ್ಷ ರೂ. ತೋರಿಸಿದೆ. ಅದನ್ನು ಹಿಂಪಡೆಯಲು ಹೋದಾಗ ಆರೋಪಿಗಳು ಶೇ. 30 ತೆರಿಗೆ ಮೊತ್ತ ಪಾವತಿಸಲು ಸೂಚಿಸಿದ್ದಾರೆ. ಅದರಂತೆ 19,26,560 ರೂ. ಮೊತ್ತವನ್ನು ಆರೋಪಿತರ ವಿವಿಧ ಖಾತೆಗೆ ವರ್ಗಾಯಿಸಿದ್ದಾರೆ.
ನಂತರ ಡಾಲರ್‌ನಲ್ಲಿರುವ ಮೊತ್ತವನ್ನು ಭಾರತೀಯ ರೂಪಾಯಿಗೆ ವರ್ಗಾಯಿಸಲು ಬ್ಯಾಂಕ್ ವಹಿವಾಟು ಶುಲ್ಕ ಶೇ.10 ಪಾವತಿಸಲು ವಂಚಕರು ಸೂಚಿಸಿದ್ದು, ಅದರಂತೆ ದೂರುದಾರರು 7,36,880 ರೂ. ವರ್ಗಾಯಿಸಿದ್ದಾರೆ. ಇಷ್ಟಾದ ಬಳಿಕವಾದರೂ 50 ಲಕ್ಷ ರೂ. ಮೊತ್ತ ವರ್ಗಾವಣೆ ಮಾಡಲು ಹೋದಾಗ ಆರೋಪಿಗಳು ಮತ್ತೆ ಮರುಳು ಮಾಡಿದ್ದು, ನಮ್ಮ ರಿಸ್ಕ್ ಕಂಟ್ರೋಲ್ ವಿಭಾಗದವರು ಇಷ್ಟು ದೊಡ್ಡ ಮೊತ್ತವನ್ನು ಹಿಂಪಡೆಯುವುದನ್ನೇ ಹೋಲ್ಡ್ ಮಾಡಿದ್ದಾರೆ. ಹಿಂಪಡೆಯಬೇಕಾದರೆ ಶೇ.50ರಷ್ಟನ್ನು ಠೇವಣಿ ಇರಿಸಬೇಕು ಎಂದಿದ್ದಾರೆ. ಅದರಂತೆ ಮತ್ತೆ ದೂರುದಾರರು 26,84,800 ರೂ. ವರ್ಗಾಯಿಸಿದ್ದಾರೆ.
ಇಷ್ಟಾದ ನಂತರವೂ ಆರೋಪಿಗಳು ದೂರುದಾರರಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದೆ, ಅದು ಏರಿಕೆಯಾಗಬೇಕಾದರೆ ಹಣ ಹಾಕಲು ತಿಳಿಸಿದ್ದಾರೆ. ಈ ರೀತಿ ದೂರುದಾರರು ಒಟ್ಟಾರೆ 1.12 ಕೋಟಿ ರೂ. ಗೂ ಅಧಿಕ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸಿ ಸಂಪೂರ್ಣ ವಂಚನೆಗೊಳಗಾಗಿದ್ದಾರೆ.
ಬಳಿಕ ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
Advertisement