ಬೀದಿ ನಾಯಿಗಳಿಗೆ ಆಹಾರ ನೀಡುವ 'ಕುಕುರ್ ತಿಹಾರ್' ಯೋಜನೆಗೆ BBMP ಚಾಲನೆ

ಪ್ರಾಯೋಗಿಕ ಹಂತದಲ್ಲಿ ಪಾಲಿಕೆಯು ಎಂಟು ವಲಯಗಳಲ್ಲಿ ಎಂಟು ಸ್ಥಳಗಳನ್ನು ಗುರುತಿಸಿ, ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತಿದ್ದು, ಈ ಯೋಜನ ಯಶಸ್ವಿಯಾದರೆ ನಗರದಾದ್ಯಂತ ವಿಸ್ತರಿಸಲಾಗುವುದು.
Stray Dog Feeding
ಬೀದಿ ನಾಯಿಗೆ ಆಯ್ದ ಸ್ಥಳಗಳಲ್ಲಿ ಆಹಾರ ನೀಡುತ್ತಿರುವುದು.
Updated on

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಯೋಜನೆ ‘ಕುಕುರ್ ತಿಹಾರ್’ಗೆ ಬಿಬಿಎಂಪಿ ಗುರುವಾರ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.

ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ವತಿಯಿಂದ ಎಲ್ಲಾ ವಲಯಗಳ ಆಯ್ದ ಸ್ಥಳಗಳಲ್ಲಿ ಗುರುವಾರ ಶ್ವಾನ ಮಹೋತ್ಸವ (ಕುಕುರ್ ತಿಹಾರ್) ಆಚರಿಸಲಾಗಿದ್ದು, ಪಾಲಿಕೆ ಕೇಂದ್ರ ಕಛೇರಿಯ ಡಾ. ರಾಜ್ ಕುಮಾರ್ ಗಾಜಿನ ಮನೆಯ ಬಳಿ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಸುರಳಕರ್ ವಿಕಾಸ್ ಅವರು, ಸಹಬಾಳ್ವೆ ಹಾಗೂ ಒನ್ ಹೆಲ್ತ್ ಭಾಗವಾಗಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಪ್ರಾಯೋಗಿಕ ಹಂತದಲ್ಲಿ ಪಾಲಿಕೆಯು ಎಂಟು ವಲಯಗಳಲ್ಲಿ ಎಂಟು ಸ್ಥಳಗಳನ್ನು ಗುರುತಿಸಿ, ಬೀದಿ ನಾಯಿಗಳಿಗೆ ಆಹಾರ ನೀಡಲಾಗುತ್ತಿದ್ದು, ಈ ಯೋಜನ ಯಶಸ್ವಿಯಾದರೆ ನಗರದಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆಯ 8 ವಲಯಗಳಲ್ಲಿ ಗುರುತಿಸಿರುವ ಆಹಾರ ನೀಡುವ ಸ್ಥಳಗಳಲ್ಲಿಯೇ ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಸ್ಥಳದಲ್ಲಿ ಬೌಲ್, ನೀರು ಹಾಗೂ ಆಹಾರ ನೀಡುವ ಸ್ಥಳ ಎಂಬ ನಾಮಫಲಕದ ವ್ಯವಸ್ಥೆ ಮಾಡಲಾಗಿರುತ್ತದೆ. ಒಂದು ತಿಂಗಳ ಕಾಲ ಇದನ್ನು ಪ್ರಾಯೋಗಿಕವಾಗಿ ಪರಿಶೀಲಿಸಲಾಗುವುದು. ಈ ವೇಳೆ ಸಾರ್ವಜನಿಕರ ಸ್ಪಂದನೆ, ಆಹಾರ ನೀಡುವ ಸ್ಥಳ, ಸಮಯ, ಸ್ಥಳೀಯ ಪ್ರದೇಶಗಳಲ್ಲಿ ಬರುವ ಸಲಹೆ - ಸೂಚನೆಗಳು ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಏನಾದರು ನ್ಯೂನ್ಯತೆಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಪಾಲಿಕೆಯ ಎಲ್ಲಾ ಕಡೆ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಈ ಯೋಜನೆಯು ಬಿಬಿಎಂಪಿಯ ಒನ್ ಹೆಲ್ತ್ ಉಪಕ್ರಮದ ಭಾಗವಾಗಿದ್ದು, ಈ ಉಪಕ್ರಮದಡಿಯಲ್ಲಿ, ಪೌರಕಾರ್ಮಿಕರು, ಆರೋಗ್ಯ ಅಧಿಕಾರಿಗಳು, ಪ್ರಾಣಿ ಪ್ರಿಯರು, ಸಾಕುಪ್ರಾಣಿಗಳ ಮಾಲೀಕರು ಮತ್ತು ಇತರ ಆಸಕ್ತ ನಾಗರಿಕರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ ಉಳಿದ ಆಹಾರವನ್ನು ಸಂಗ್ರಹಿಸಿ ಬೀದಿ ನಾಯಿಗಳಿಗೆ ನೀಡಲಿದ್ದಾರೆ. ಪಾಲಿಕೆ ವ್ಯಾಪ್ತಿಯ ಸ್ಥಳೀಯ ಹೋಟೆಲ್ ಮತ್ತು ರೆಸ್ಟೋರೆಂಟ್​ಳಲ್ಲಿ ಉಳಿಯುವ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವ ಕುರಿತು ಮಾಲೀಕರ ಜೊತೆ ಚರ್ಚಿಸಲಾಗಿದ್ದು, ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ. ಆರೋಗ್ಯಕರ ಆಹಾರವನ್ನು ಒದಗಿಸಲು ಆಯಾ ಪ್ರದೇಶಗಳಲ್ಲಿನ ಹೋಟೆಲ್​​ಗಳಿಗೆ ತಿಳಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ 2.70 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಬೀದಿ ನಾಯಿಗಳ ದಾಳಿಯನ್ನು ತಡೆಯಬೇಕಿದೆ. ಈ ಬಗ್ಗೆ ಪಶು ವೈದ್ಯರು, ಪರಿಣಿತ ತಜ್ಞರು, ಪ್ರಾಣಿ ಪ್ರಿಯ ಸ್ವಯಂಸೇವಕರು ಬಳಿ ಚರ್ಚೆ ನಡೆಸಿದಾಗ ಬೀದಿ ನಾಯಿಗಳಿಗೆ ಆಹಾರ ಸರಿಯಾಗಿ ಸಿಗದಿರುವ ಪರಿಣಾಮ ಕಚ್ಚುವ ಹಾಗೂ ಉದ್ರೇಕಗೊಳ್ಳುವ ಘಟನೆಗಳು ನಡೆಯುತ್ತಿವೆ ಎಂಬುದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗುವಂತಾಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com