
ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಅವಾಂತರಗಳು ಸೃಷ್ಟಿಯಾಗಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜಕಾಲುವೆಗಳ ಅಕ್ಕಪಕ್ಕ 50 ಅಡಿವರೆಗೂ ಕಟ್ಟಡ ನಿರ್ಮಾಣಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದೆ.
ನಗರದಲ್ಲಿ ಮಳೆ ಅವಾಂತರ ಕುರಿತು ಗುರುವಾರ ಅಧಿಕಾರಿಗಳೊಂದಿಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ತುರ್ತು ಸಭೆ ನಡೆಸಿದ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಕೆರೆಗಳ ನಡುವೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಅಕ್ಕಪಕ್ಕ 50 ಅಡಿ ಅಂತರದಲ್ಲಿ ಕಟ್ಟಡ ನಿರ್ಮಾಣ ನಿಷೇಧಿಸುವುದು ಹಾಗೂ ಅಪಾಯಕಾರಿ, ಅನಧಿಕೃತ ಕಟ್ಟಡಗಳ ತೆರವು ಮಾಡಲು ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ. ರಾಜಕಾಲುವೆ ಅಕ್ಕಪಕ್ಕದಲ್ಲಿ 50 ಅಡಿಗಳಲ್ಲಿ ಜಾಗವನ್ನು ಗುರುತಿಸಲಾಗಿದ್ದು, ಇಲ್ಲಿ 300 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಒತ್ತುವರಿ ನಿಲ್ಲುತ್ತದೆ, ಮಳೆನೀರು ಹರಿಯಲು ನೆರವಾಗುತ್ತದೆ. ಯೋಜನೆಯ ಆರಂಭಿಕ ಹಂತಕ್ಕೆ ಹಣ ಮೀಸಲಿಡಲಾಗಿದೆ ಎಂದು ಹೇಳಿದರು.
ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಅನೇಕ ಕಟ್ಟಡಗಳನ್ನು ಒಡೆದು ಹಾಕಲು ಆದೇಶ ನೀಡಲಾಗಿದೆ. ಪ್ರತಿ ವಲಯದಲ್ಲಿ ಅಕ್ರಮ, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಸರ್ಕಾರಕ್ಕೆ ಯಾವುದೇ ಆಸ್ತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಧಿಕಾರವಿದೆ. ಬಿಎಂಟಿಎಫ್, ಬಿಡಿಎ, ಬಿಬಿಎಂಪಿ, ಬಿಎಂಆರ್‌ಡಿಎ ಕಾಯ್ದೆಗೆ ಕೆಲವು ತಿದ್ದುಪಡಿ ತಂದು ಹೆಚ್ಚಿನ ಅಧಿಕಾರ ನೀಡಲಾಗುವುದು. ಕಂದಾಯ ಬಡಾವಣೆಯಾಗಿರಲಿ, ಬೇರೆ ಬಡಾವಣೆಯಾಗಿರಲಿ ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಒತ್ತುವರಿ ನಿಲ್ಲಿಸಲು ಸುಗ್ರೀವಾಜ್ಞೆ ತರಲು ಗೃಹ ಇಲಾಖೆ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ. ಈ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ, ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆ ಖಾಸಗಿ ಹಾಗೂ ಪಾಲಿಕೆಯಿಂದ ಸೋಮವಾರದಿಂದ ಸಮೀಕ್ಷೆ ನಡೆಸಲಾಗುವುದು. ಕಾನೂನುಬಾಹಿರ ನಿರ್ಮಾಣಗಳನ್ನು ಪತ್ತೆ ಹಚ್ಚಿ, ಪ್ರತಿ ಕಟ್ಟಡದ ಚಿತ್ರ ಹಾಗೂ ವೀಡಿಯೊಗಳನ್ನು ಸಂಗ್ರಹಿಸಲಾಗುವುದು. ಜಂಟಿ ಆಯುಕ್ತರ ನೇತೃತ್ವದಲ್ಲಿ ಡ್ರೋನ್ ಕ್ಯಾಮೆರಾಗಳಿಂದ ಮೇಲ್ವಿಚಾರಣೆ ಮಾಡಲಾಗುವುದು ಎಂದರು.
‘ಮಳೆ ನೀರು ವಸತಿ ಪ್ರದೇಶಗಳಿಗೆ ನುಗ್ಗಿ ಸಮಸ್ಯೆ ಎದುರಾಗುತ್ತಿರುವ ಎಲ್ಲ ಪ್ರದೇಶಗಳಲ್ಲಿ ಪರಿಹಾರಕ್ಕೆ ಯೋಜನೆ ರೂಪಿಸಿ, ಅಗತ್ಯವಿರುವ ಹಣಕಾಸಿನ ಅಂದಾಜು ನೀಡಲು ವಲಯವಾರು ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಹಾಗೂ ಮಳೆ ನೀರುಗಾಲುವೆ ನಿರ್ವಹಣೆ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಒಂದು ವಾರದ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ. ಇದಲ್ಲದೆ, ಕೆರೆಗಳ ನಡುವೆ ಸಂಪರ್ಕ ಏರ್ಪಡಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ‘ಮಾಸ್ಟರ್ ಪ್ಲಾನ್’ ಸಿದ್ಧಪಡಿಸಲು ಸೂಚಿಸಲಾಗಿದೆ. ಕೆರೆಯಿಂದ ಕೋಡಿ ಬೀಳುವ ನೀರು ಸರಾಗವಾಗಿ ಹೋಗಲು ಅನುವಾಗುವಂತೆ ಗೇಟ್ ಅಳವಡಿಸಲಾಗುತ್ತದೆ. ಕೆರೆಗಳಿಗೆ ಕೇವಲ ಮಳೆ ನೀರು ಹೋಗುವಂತೆ ನೋಡಿಕೊಳ್ಳಬೇಕು. ಈ ಕಾಮಗಾರಿಗೆ ಖಾಸಗಿ ಜಮೀನು ಅಗತ್ಯವಿದ್ದರೆ ಟಿಡಿಆರ್ ನೀಡುವ ಮೂಲಕ ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದರು.
ಮಳೆಯಿಂದ ಕಳಪೆ ಗುಣಮಟ್ಟದ ಕಟ್ಟಡ ಕುಸಿದು, ಕೆರೆಯಲ್ಲಿ ಮುಳುಗಿ 8 ಕಾರ್ಮಿಕರು ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು ಬಿಟ್ಟರೆ ಬೇರೆ ಮತ್ತಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಇದೇ ವೇಳೆ ಮಾಹಿತಿ ನೀಡಿದರು
Advertisement