
ಬೆಂಗಳೂರು: ಆತ್ಮಹತ್ಯೆಗೆ ಶರಣಾಗಲು ರೈಲು ಹಳಿಗಳ ಮೇಲೆ ನಿಂತು ರೈಲಿಗಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಕೂಲಿ ಕಾರ್ಮಿಕ ಸತೀಶ್ (ಹೆಸರು ಬದಲಾಯಿಸಲಾಗಿದೆ) ತನ್ನ ಪತ್ನಿಯೊಂದಿಗೆ ಜಗಳವಾಡಿಕೊಂಡು ಮನೆಯಿಂದ ಹೊರ ಬಂದಿದ್ದಾನೆ. ಬಳಿಕ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿ ರಾಜನಕುಂಟೆ ರೈಲ್ವೆ ಹಳಿ ಕಡೆಗೆ ಹೋಗಿದ್ದಾನೆ. ಈ ವೇಳೆ ತನ್ನ ಸಹೋದರಿ ಲತಾಗೆ ಕರೆ ಮಾಡಿ, ಪತ್ನಿ ನಿರಂತರ ಜಗಳವಾಡುತ್ತಿದ್ದು, ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆಂದು ಹೇಳಿಕೊಂಡಿದ್ದಾನೆ. ಈ ವೇಳೆ ಸಹೋದರಿ ಸಮಾಧಾನಪಡಿಸಲು ಯತ್ನಿಸಿದ್ದು, ಅದಾಗಲೇ ತಾನು ಹಳಿಗಳ ಮೇಲೆ ನಿಂತಿರುವುದಾಗಿ ಹೇಳಿದ್ದಾನೆ.
ಇದರಿಂದ ಆಘಾತಕ್ಕೊಳಗಾದ ಲತಾ 112ಗೆ ಕರೆ ಮಾಡಿ ಗಸ್ತು ಕರ್ತವ್ಯದಲ್ಲಿದ್ದ ಎಎಸ್ಐ ನಾಗೇಶ್ ಅವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಲತಾ ಅವರ ನಂಬರ್ ಟ್ರೇಲ್ ಮಾಡಿದಾಗ ಸ್ಥಳದಿಂದ ಆಕೆ ದೂರದಲ್ಲಿರುವ ಕಾರಣ ಪತ್ತೆ ಸಾಧ್ಯವಾಗಿಲ್ಲ. ಬಳಿಕ ಸತೀಶ್ ಅವರ ನಂಬರ್ ತೆಗೆದುಕೊಂಡು ಟ್ರೇಸ್ ಮಾಡಿದ್ದಾರೆ. ಬಳಿಕ ನಾಗೇಶ್ ಅವರು ಎಸಿಪಿ ಸಂಜೀವ್ ಕುಮಾರ್ ಜೊತೆಗೆ ಸ್ಥಳಕ್ಕಾಗಮಿಸಿದಾಗ ಹಳಿಗಳ ಮೇಲೆ ಸತೀಶ್ ಮಲಗಿರುವುದು ಹಾಗೂ ರೈಲು ಬರುತ್ತಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರು ಸತೀಶ್ ಬಳಿ ಓಡಿದ್ದು, ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಆತ್ಮಹತ್ಯೆಗೆ ಯತ್ನಿಸಿದ ಸತೀಶ್ ಅವರನ್ನು ಕೌನ್ಸಿಲಿಂಗ್'ಗೆ ಒಳಪಡಿಸಲಾಗಿದೆ. ಪೊಲೀಸರು ಸಮಯಕ್ಕೆ ಬರುವುದಿಲ್ಲ ಎಂದು ಹಲವರು ಹೇಳುತ್ತಾರೆ. ಪರಿಸ್ಥಿತಿ ಸಂದರ್ಭಧಲ್ಲಿ ಅವರವರೇ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಜನರು ಯಾವಾಗ ಬೇಕಾದರೂ 112ಗೆ ಕರೆ ಮಾಡಬಹುದು. ಸಹಾಯಕ್ಕೆ ಪೊಲೀಸರು ಬಂದೇ ಬರುತ್ತಾರೆಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ.ಬಾಬಾ ಅವರು ಹೇಳಿದ್ದಾರೆ.
Advertisement