ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ತನ್ನ ಪತಿಯನ್ನು ಸುಪಾರಿ ನೀಡಿ ಕೊಲೆ ಮಾಡಿಸಿ, ಬಳಿಕ ದೂರು ನೀಡಿ ನಾಟಕವಾಡಿದ್ದ ಪತ್ನಿ ಸೇರಿ ಐವರು ಆರೋಪಿಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರನ್ನು ನಾಗರತ್ನ, ಆಕೆಯ ಪ್ರಿಯಕರ ರಾಮ್, ಶಶಿಕುಮಾರ್, ಸುರೇಶ್ ಹಾಗೂ ಚಿನ್ನ ಎಂದು ಗುರ್ತಿಸಲಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ತಿಪ್ಪೇಶ್ ಎಂದು ಗುರ್ತಿಸಲಾಗಿದೆ.
10 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ತಿಪ್ಪೇಶ್ ಹಾಗೂ ನಾಗರತ್ನ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೂಲಿ ಅರಸಿಕೊಂಡು ನಗರಕ್ಕೆ ಬಂದಿದ್ದ ತಿಪ್ಪೇಶ್ ದಂಪತಿ, ಬೆಳ್ಳಂದೂರು ಸಮೀಪ ನಿರ್ಮಾಣ ಹಂತದ ಕಟ್ಟಡಗಳಲ್ಲಿ ದುಡಿದು ಜೀವನ ಸಾಗಿಸುತ್ತಿದ್ದರು. ಬೋಗನಹಳ್ಳಿ ಲೇಬರ್ ಶೆಟ್ ನಲ್ಲಿ ವಾಸವಿದ್ದರು.
ಈ ನಡುವೆ ನಾಗರತ್ನ ತನ್ನ ಸಹೋದರಿ ಪತಿ ರಾಮನ ಜೊತೆಗೆ ನಾಗರತ್ನ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಚಾರ ತಿಳಿದ ತಿಪ್ಪೇಶ್, ಪತ್ನಿಯೊಂದಿಗೆ ಜಗಳವಾಡಿದ್ದ. ಈ ವಿಚಾರವನ್ನು ರಾಮನಿಗೆ ನಾಗರತ್ನ ಹೇಳಿದ್ದು, ಈ ವೇಳೆ ಇಬ್ಬರೂ ಸೇರಿ ಹತ್ಯೆಗೆ ಸಂಚು ರೂಪಿಸಿದ್ದಾರೆ. ಬಳಿಕ ಸುರೇಶ್, ಶಶಿಕುಮಾರ್ ಹಾಗೂ ಚಿನ್ನನ್ನು ಸಂಪರ್ಕಿಸಿ ಹತ್ಯೆಗೆ ಸುಪಾರಿ ನೀಡಿದ್ದಾರೆ.
ಪೂರ್ವಯೋಜಿತ ಸಂಚಿನಂತೆ ಅ.14ರಂದು ಹಣ ತರುವ ನೆಪದಲ್ಲಿ ಮನೆಯಿಂದ ಪತಿ ತಿಪ್ಪೇಶ್ ನನ್ನು ನಾಗರತ್ನ ಹೊರಗೆ ಕರೆತಂದಿದ್ದು, ಬಳಿಕ ಆರೋಪಿಗಳೊಂದಿಗೆ ಸೇರಿ ಉಸಿರುಗಟ್ಟಿಸಿ ತಿಪ್ಪೇಶ್ ನನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿರುವ ನಾಗರತ್ನ, ತಮ್ಮ ಪತಿಯನ್ನು ಯಾರೋ ಹತ್ಯೆ ಮಾಡಿ, ಪರಾರಿಯಾಗಿದ್ದಾರೆಂದು ದೂರು ನೀಡಿದ್ದಾಳೆ.
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಸಂಖ್ಯೆಗಳ ಕರೆಗಳ ವಿವರ ಸಂಗ್ರಹಿಸಿದ್ದಾರೆ. ಈ ವೇಳೆ ನಾಗರತ್ನ ಆರೋಪಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ವಿಚಾರ ತಿಳಿದುಬಂದಿದೆ. ಬಳಿಕ ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ನಾಗರತ್ನ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement