ಹಾಸನ: ರಾಜ್ಯದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಎತ್ತನಹೊಳೆ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ ಚಾಲನೆ ನೀಡಲಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ವಾರದ ಹಿಂದೆಯೇ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಿದ್ದರು. ಇದೀಗ ಗೌರ ಹಬ್ಬದ ದಿನದಂದೇ ಮುಖ್ಯಮಂತ್ರಿಗಳು ಯೋಜನೆಯ ಮೊದಲ ಹಂತಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುರುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ನೀರೊದಗಿಸುವ ಈ ಯೋಜನೆಗೆ 2014ರಲ್ಲಿ ಶುರುವಾಗಿತ್ತು. ಸುಮಾರು 8 ಸಾವಿರ ಕೋಟಿ ಅಂದಾಜು ವೆಚ್ಚದೊಂದಿಗೆ ಆರಂಭವಾದ ಈ ಯೋಜನೆಯ ಮೊದಲ ಹಂತ ಇದೀಗ ಉದ್ಘಾಟನೆಗೆ ಸಿದ್ಧವಾಗಿದೆ. ಇನ್ನು ಮೂರು ವರ್ಷಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ನಡುವೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಹಾಸನದ ಕಡೆಯಿಂದ ಬರುವ ಸಾರ್ವಜನಿಕರು ಈಶ್ವರಹಳ್ಳಿ ಕೂಡಿಗೆಯಿಂದ ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿ ಸಮಾರಂಭ ಸ್ಥಳಕ್ಕೆ ಆಗಮಿಸಬೇಕಾಗುತ್ತದೆ. ಹೆಚ್ಚುವರಿಯಾಗಿ ಹಾಸನದ ಕಡೆಯಿಂದ ಮತ್ತು ಸಕಲೇಶಪುರದ ಕಡೆಯಿಂದ ಬರುವ ಸಾರ್ವಜನಿಕರಿಗೆ ಬಾಗೆ-ಬೆಳಗೋಡು ರಸ್ತೆ ಮುಖಾಂತರ ಹೆಬ್ಬನಹಳ್ಳಿ ಗ್ರಾಮದ ಸಮಾರಂಭ ಸ್ಥಳಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ.
ಎತ್ತಿನಹೊಳೆ ಯೋಜನೆ ಕಾಮಗಾರಿ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿ ಗಣ್ಯವ್ಯಕ್ತಿಗಳ ಸಂಚಾರಕ್ಕಾಗಿ ಗುಲಗಳಲೆ ಚಿಕ್ಕಿ ಫ್ಯಾಕ್ಟರಿ ಮುಖಾಂತರ ಹೆಬ್ಬನಹಳ್ಳಿ ಗ್ರಾಮದ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ರಸ್ತೆ ಕಾಯ್ದಿರಿಸಲಾಗಿದೆ. ಈ ರಸ್ತೆಯಲ್ಲಿ ಯಾವುದೇ ಸಾರ್ವಜನಿಕ ವಾಹನಗಳಿಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಗಣ್ಯ ವ್ಯಕ್ತಿಗಳು ಎತ್ತಿನಹೊಳೆ ಯೋಜನೆ ಕಾಮಗಾರಿ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಹೆಬ್ಬನಹಳ್ಳಿ ಗ್ರಾಮದ ಸಮಾರಂಭ ಸ್ಥಳಕ್ಕೆ ತೆರಳಲು ಮಠಸಾಗರ ಜಂಕ್ಷನ್ ಮುಖಾಂತರ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ.
ಬೇಲೂರು-ಅರೇಹಳ್ಳಿ ಕಡೆಯಿಂದ ಬರುವ ಸಾರ್ವಜನಿಕರಿಗೆ ಸುಂಡೇಕೆರೆ ಸರ್ಕಲ್-ಹೆಬ್ಬನಹಳ್ಳಿ ಮುಖಾಂತರ ಸಮಾರಂಭ ಸ್ಥಳಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಮನವಿ ಮಾಡಿದ್ದಾರೆ
Advertisement