ಬೆಂಗಳೂರು: ಬೃಹತ್ ಪ್ರಮಾಣದ ಇವಿಎಂಗಳ ಉತ್ಪಾದನೆ ಸೇರಿದಂತೆ ರಫ್ತು ತಯಾರಿಕೆಗೆ ಉತ್ಪಾದನೆ, ಪರೀಕ್ಷೆ, ಸಂಗ್ರಹಣೆ ಮತ್ತು ಉನ್ನತೀಕರಣಕ್ಕಾಗಿ ಮೂಲಸೌಕರ್ಯ ಸೌಲಭ್ಯಗಳನ್ನು ಸೃಷ್ಟಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ತನ್ನ ಕ್ಯಾಂಪಸ್‌ನಲ್ಲಿರುವ 900 ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಮುಂದಾಗಿದೆ.
ಈ ಕುರಿತಂತೆ ವೃಕ್ಷ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಕ್ಷೇಪಣೆಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸುವಂತೆ ಸೂಚಿಸಿದೆ.
ಪರಿಸರ ಪ್ರೇಮಿಗಳ ಆಕ್ರೋಶ
ಇನ್ನು ಬೆಂಗಳೂರು ಜೀವವೈವಿಧ್ಯ ಸದಸ್ಯ ವಿಜಯ್ ನಿಶಾಂತ್ ಅವರು ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಆಕ್ಷೇಪಣೆ ಸಲ್ಲಿಕೆಗೆ ಹತ್ತು ದಿನಗಳ ಕಾಲಾವಕಾಶ ಸಾಕಾಗುವುದಿಲ್ಲ ಮತ್ತು ಪ್ರಸ್ತಾವನೆಯನ್ನು ಪರಿಗಣಿಸಲು ಸಾಕಷ್ಟು ಸಮಯ ನೀಡಬೇಕು. ಕಡಿಯಬೇಕಾದ ಮರಗಳ ಸಂಖ್ಯೆಯು ದೊಡ್ಡ ಪ್ರಮಾಣವಾದ್ದರಿಂದ ಈ ಬಗ್ಗೆ ಸಾರ್ವಜನಿಕ ಸಮಾಲೋಚನೆ ಇರಬೇಕು.
ವೃಕ್ಷ ಸಮಿತಿಯ ಪ್ರಾಥಮಿಕ ಉದ್ದೇಶವು ಮರಗಳನ್ನು ಸಂರಕ್ಷಿಸುವುದು ಆಗಿರಬೇಕು ಮತ್ತು ಅರ್ಜಿ ಸಲ್ಲಿಸಿದಾಗ ಮರಗಳನ್ನು ಕಡಿಯುವುದನ್ನು ಅನುಮೋದಿಸುವುದು ಅಥವಾ ನಿರಾಕರಿಸುವುದು ಅಲ್ಲ”ಎಂದು ಹೇಳಿದರು.
ಅಂತೆಯೇ ಸಮಿತಿಯು ಇನ್ನೂ ಮರದ ಸಸಿಗಳನ್ನು ನೆಡುವ ಬಗ್ಗೆ ಮತ್ತು ಅದರ ಯಶಸ್ಸಿನ ದರಗಳು ಮತ್ತು ಪ್ರಸ್ತುತ ಸ್ಥಿತಿ ಕುರಿತು ಯಾವುದೇ ವರದಿಯನ್ನು ಪ್ರಕಟಿಸಿಲ್ಲ ಎಂದು ಹೇಳಿದರು.
ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರವೇ ಮರಗಳನ್ನು ಕಡಿಯುವ ಬಗ್ಗೆ ತೀರ್ಮಾನಕ್ಕೆ ಬರಬಹುದು ಎಂದು ಬೆಂಗಳೂರು ಪರಿಸರ ಟ್ರಸ್ಟ್‌ನ ಟ್ರಸ್ಟಿ ದತ್ತಾತ್ರೇಯ ದಾವರೆ ಅಭಿಪ್ರಾಯಪಟ್ಟಿದ್ದಾರೆ. ಭೂಮಿ ಲಭ್ಯತೆಯಿಂದಾಗಿ ಈ ಹಿಂದೆ ಬಿಇಎಲ್ ತೋಟಗಳನ್ನು ನಡೆಸಿರಬಹುದು. ಅಂತಹ ವಿಸ್ತರಣೆ ಅಗತ್ಯವಿದೆಯೇ ಅಥವಾ ಬೇರೆ ಸ್ಥಳಕ್ಕೆ ಆದ್ಯತೆ ನೀಡಬೇಕೇ ಎಂಬುದು ಇಲ್ಲಿ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ಆಕ್ಷೇಪಣೆಗೆ ಕೇವಲ ಹತ್ತು ದಿನಗಳ ಕಾಲಾವಕಾಶವಿದ್ದರೂ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ಇಲಾಖೆ ಸಾರ್ವಜನಿಕರನ್ನು ಸಂಪರ್ಕಿಸುತ್ತದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಭರವಸೆ ನೀಡಿದರು.
"ಕಡಿಯಬೇಕಾದ ಮರಗಳ ಸಂಖ್ಯೆ ದೊಡ್ಡದಾಗಿದೆ ಮತ್ತು ನಾವು ಅಲ್ಲಿನ ಮರಗಳ ಪ್ರಕಾರಗಳ ಬಗ್ಗೆ ಕಂಡುಹಿಡಿಯುತ್ತೇವೆ. ನಾವು ಮೊದಲು ಚರ್ಚೆಗಳು ಮತ್ತು ಸಾರ್ವಜನಿಕ ಸಮಾಲೋಚನೆಗಳನ್ನು ನಡೆಸುತ್ತೇವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿಎಲ್‌ಜಿ ಸ್ವಾಮಿ ಹೇಳಿದರು. ಅಂತೆಯೇ ಕರ್ನಾಟಕ ಮರಗಳ ಸಂರಕ್ಷಣೆ ಕಾಯಿದೆ 1976 ರ ಸೆಕ್ಷನ್ 8 (3) (vii) ಅಡಿಯಲ್ಲಿ ನಾಗರಿಕರಿಂದ ಆಕ್ಷೇಪಣೆಗಳು, ಸಲಹೆಗಳು ಮತ್ತು ಟೀಕೆಗಳನ್ನು ಆಹ್ವಾನಿಸಲಾಗಿದೆ.
Advertisement