
ಬೆಂಗಳೂರು: ಕೋವಿಡ್-19 ಸಂದರ್ಭದಲ್ಲಿ ಔಷಧ, ವೈದ್ಯಕೀಯ ಸಾಮಾಗ್ರಿ ಖರೀದಿ ಸೇರಿ ಸಾಂಕ್ರಾಮಿಕ ನಿರ್ವಹಣೆಯಲ್ಲಿ ನಡೆದಿರುವ ಸಾವಿರಾರು ಕೋಟಿ ರೂ. ಅಕ್ರಮ ಆರೋಪ ಕುರಿತಂತೆ ನ್ಯಾ. ಕುನ್ಹಾ ನೇತೃತ್ವದ ತನಿಖಾ ಆಯೋಗದ ವರದಿಯನ್ನು ಅಧ್ಯಯನ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸಲು ಅಧಿಕಾರಿಗಳ ಸಮಿತಿ ರಚನೆಗೆ ಸರ್ಕಾರ ಮುಂದಾಗಿದ್ದು, ಸರ್ಕಾರದ ಈ ಕ್ರಮವನ್ನು ಬಿಜೆಪಿ ಸ್ವಾಗತಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಆರೋಗ್ಯ ಸಚಿವ ಹಾಗೂ ಸಂಸದ ಡಾ.ಕೆ.ಸುಧಾಕರ್ ಅವರು, ಕೋವಿಡ್‌ನ ದೊಡ್ಡ ಆಪತ್ಕಾಲದಲ್ಲಿ ನಾವು ಪರಿಸ್ಥಿತಿ ಎದುರಿಸಿದ್ದೇವೆ. ಸರ್ಕಾರ, ನಿವೃತ್ತ ನ್ಯಾಯಾಧೀಶರಿಂದ ಮಧ್ಯಂತರ ವರದಿ ತರಿಸಿಕೊಂಡಿದೆ. ಅದಕ್ಕೆ ನನ್ನ ಸ್ವಾಗತವಿದೆ. ಈ ವರದಿಯನ್ನು ಅಧಿಕಾರಿಗಳ ಪರಿಶೀಲನೆಗೆ ಕೊಟ್ಟಿದ್ದಾರೆ. ಇದನ್ನೂ ನಾನು ಸ್ವಾಗತಿಸುತ್ತೇನೆಂದು ಹೇಳಿದರು.
ಕೋವಿಡ್‌ನ್ನು ಒಬ್ಬ ವ್ಯಕ್ತಿ ನಿರ್ವಹಿಸಿಲ್ಲ, ಇಡೀ ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದೆ. ನಾವೆಲ್ಲರೂ ಎಲ್ಲೂ ಹೋಗುವುದಿಲ್ಲ. ನಾನು, ಬೊಮ್ಮಾಯಿ, ಯಡಿಯೂರಪ್ಪ ಮತ್ತು ಅಂದಿನ ಸಚಿವರೆಲ್ಲರೂ ಕೋವಿಡ್ ನಿರ್ವಹಿಸಿದ್ದೇವೆ. ನಾವೆಲ್ಲರೂ ಎಲ್ಲೂ ಹೋಗುವುದಿಲ್ಲ, ಇಲ್ಲೇ ಇರುತ್ತೇವೆ. ಅವರು ಸುಧಾಕರ್ ವಿರುದ್ಧ ತನಿಖೆ ಎಂದು ಹೇಳಿದ್ದಾರಾ? ಇಲ್ವಲ್ಲ. ನಾನು ಇನ್ನೂ ಮಧ್ಯಂತರ ವರದಿ ಓದಲಿಲ್ಲ. ಅಧಿಕಾರಿಗಳ ವ್ಯಾಖ್ಯಾನ ಏನು ಬರುತ್ತೆ ಎಂದು ಕಾದು ನೋಡೋಣ ಎಂದು ತಿಳಿಸಿದರು.
ಅನೇಕರು ಶಂಕೆ ಉಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಆದಷ್ಟು ಬೇಗ ಕೋವಿಡ್ ಬಗ್ಗೆ ಅಧಿಕಾರಿಗಳ ವರದಿ ಬರಲಿ. ಯಡಿಯೂರಪ್ಪನವರ ಕಾಲದಲ್ಲಿ ಯಾವ ರೀತಿಯ ಕೋವಿಡ್ ನಿರ್ವಹಣೆಯಾಗಿತ್ತು ಎಂದು ಗೊತ್ತಾಗಲಿ. ಅಧಿಕಾರಿಗಳ ವರದಿ ಬಂದ ನಂತರವೇ ನಾನು ಇದರ ಬಗ್ಗೆ ಉತ್ತರ ಕೊಡುತ್ತೇನೆ. ಈಗ ನನ್ನ ಬಳಿ ಹೇಳಲು ಏನೂ ಇಲ್ಲ. ಅನೇಕರ ಪ್ರಾಣ ರಕ್ಷಣೆಯನ್ನು ಮಾಡುವ ಸಲುವಾಗಿ ಆವತ್ತಿನ ಒತ್ತಡದ ಕಾಲದಲ್ಲಿ ಕೆಲವು ನಿರ್ಣಯ ತೆಗೆದುಕೊಂಡಿದ್ದೆವು. ಇವತ್ತು ಅದನ್ನು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಮಾಡಲಿ ಸತ್ಯ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.
ಮುಡಾ/ವಾಲ್ಮೀಕಿ ಅಕ್ರಮಗಳ ಹಿನ್ನೆಲೆ ಕೋವಿಡ್ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಪ್ರಶ್ವೆಗೆ ಉತ್ತರಿಸಿ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಇದಕ್ಕೆ ಉತ್ತರಿಸಲು ರಾಜ್ಯಾಧ್ಯಕ್ಷರಿದ್ದಾರೆ. ಪ್ರತಿಪಕ್ಷ ನಾಯಕರಿದ್ದಾರೆ. ಹೆಚ್.ಕೆ ಪಾಟೀಲ್‌ರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಹೆಚ್.ಕೆ.ಪಾಟೀಲ್ ಹೇಳಿದಾಕ್ಷಣ ಎಲ್ಲವೂ ಮುಗಿಯುತ್ತಾ? ಅವರು ಸಚಿವ ಸಂಪುಟದ ವಕ್ತಾರರು ಅಷ್ಟೇ. ಅವರೇನು ನ್ಯಾಯಾಧೀಶರೇ? ಅವರು ವಕ್ತಾರರ ಕೆಲಸ ಮಾತ್ರ ಮಾಡಬೇಕೇ ಹೊರತು ನ್ಯಾಯಧೀಶರ ಕೆಲಸ ಯಾಕೆ ಮಾಡಬೇಕು ಎಂದು ಹೆಚ್.ಕೆ.ಪಾಟೀಲ್ ವಿರುದ್ಧ ಗರಂ ಆದರು.
ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಿ, 2014 ರಲ್ಲಿ ಎತ್ತಿನಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ನನ್ನ ಅಧ್ಯಕ್ಷತೆಯಲ್ಲೇ ಶಂಕುಸ್ಥಾಪನೆ ಮಾಡಿದರು. ಇವತ್ತು ಯೋಜನೆಯ ಮೊದಲ ಹಂತದ ಉದ್ಘಾಟನಾ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನಗೆ ವೈಯಕ್ತಿಕವಾಗಿ ಆಹ್ವಾನ ಕೊಟ್ಟಿದ್ದರು. ನಾನು ಅವರಿಗೆ ಆಭಾರಿ ಆಗಿರುತ್ತೇನೆ ಎಂದು ಹೇಳಿದರು.
ಈಗ ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 24 ಸಾವಿರ ಕೋಟಿ ರೂ. ಆಗಿದೆ. ಕೋಲಾರ-ಚಿಕ್ಕಬಳ್ಳಾಪುರಕ್ಕೆ ಮೊದಲ ಹಂತದಲ್ಲಿ ನೀರು ತರುವುದು ಸಾಧ್ಯವಾಗಲಿಲ್ಲ. ಇದಕ್ಕೆ ಇನ್ನೂ ಜಲಾಶಯ ನಿರ್ಮಾಣ ಬಾಕಿ ಇದೆ. ಇನ್ನೂ ಭೂಸ್ವಾಧೀನ ಕೆಲಸ ಬಾಕಿ ಇದೆ. ಮುಂದುವರೆಯಬೇಕಿರುವ ಕಾಮಗಾರಿಗಳನ್ನು ಆದಷ್ಟು ಪ್ರಾಶಸ್ತ್ಯ ರೂಪದಲ್ಲಿ ಕೈಗೊಳ್ಳಲಿ ಎಂದು ನಾನು ಡಿಕೆಶಿ ಅವರಿಗೆ ಮನವಿ ಮಾಡುತ್ತೇನೆ. ನಮ್ಮ ಜಿಲ್ಲೆಗಳಲ್ಲಿ ಎಸ್‌ಟಿಪಿ ನೀರು ಕುಡಿಯುತ್ತಿದ್ದೇವೆ. ಎಸ್‌ಟಿಪಿ ನೀರು ಕುಡಿಯುವಂತಹ ನಮ್ಮ ಅವಳಿ ಜಿಲ್ಲೆಗಳ ಜನರ ಶಾಪಕ್ಕೆ ನಾವು ಒಳಗಾಗಿದ್ದಾರೆ. ಈ ಶಾಪದಿಂದ ಈ ಸರ್ಕಾರ ನಮ್ಮನ್ನು ವಿಮುಕ್ತಿ ಮಾಡಲಿ ಎಂದು ಕೇಳಿಕೊಂಡರು.
ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಂಡಿದ್ದು ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ. ಇದರಲ್ಲಿ ಎರಡು ಮಾತಿಲ್ಲ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಗಡಿ ಭಾಗಕ್ಕೆ ಕೃಷ್ಣ ನೀರು ಬಂದಿದೆ. ಕೃಷ್ಣ ನೀರನ್ನು ಬಳಸಿಕೊಂಡರೆ ಶಾಶ್ವತ ಪರಿಹಾರ ಸಿಗುತ್ತದೆ. ಈ ಸಂಬಂಧ ಆಂಧ್ರ ಸಿಎಂ ಜೊತೆ ಮಾತನಾಡಿ, ಕೇಂದ್ರಕ್ಕೂ ಸರ್ವಪಕ್ಷ ನಿಯೋಗ ಕೊಂಡೊಯ್ದರೆ ಇದು ಸಾಧ್ಯವಾಗುತ್ತೆ. ಚಂದ್ರಬಾಬುನಾಯ್ಡು ನಮ್ಮ ಎನ್‌ಡಿಎ ಒಕ್ಕೂಟದ ಒಂದು ಭಾಗ. 10 ಟಿಎಂಸಿ ನೀರನ್ನು ನಾರಾಯಣಪುರ ಜಲಾಶಯದ ಮೂಲಕ ಆಂಧ್ರಕ್ಕೆ ಕೊಟ್ಟು, ಕೃಷ್ಣ ನೀರನ್ನು ಈ ಭಾಗದಲ್ಲಿ ಬಳಸಿಕೊಳ್ಳಬೇಕು. ಆರು ತಿಂಗಳೊಳಗೆ ಇದು ಸಾಧ್ಯವಾಗುತ್ತದೆ. ಶಾಶ್ವತ ಪರಿಹಾರವೂ ಸಿಗುತ್ತದೆ. ಎತ್ತಿನಹೊಳೆ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಿ. ಅದಕ್ಕಿಂತ ಸುಲಭವಾಗಿ ಇದನ್ನ ಮಾಡಬಹುದು. ನೆರೆಯ ಆಂಧ್ರದ ಗಡಿಗೆ ಬಂದಿರುವ ಕೃಷ್ಣ ನೀರು ಬಳಕೆಗೆ ಕ್ರಮವಹಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಆಗಿದೆ ಎಂಬ ಸಿ.ಟಿ.ರವಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಸಿಗುವುದಿಲ್ಲ ಎನ್ನುವ ಚರ್ಚೆ ಹತ್ತು ವರ್ಷಗಳಿಂದಲೂ ಇದೆ. ಒಟ್ಟಾರೆ ನಮ್ಮ ಭಾಗದ ಜನರಿಗೆ ನೀರು ಸಿಕ್ಕರೆ ಸಾಕು. ಸಿ.ಟಿ.ರವಿ ಅವರು ಮಾಡಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲಾ ಯೋಜನೆಗಳಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಪ್ರಶ್ನೆ ಮಾಡಿದರೆ ಅಭಿವೃದ್ಧಿಯೇ ಆಗುವುದಿಲ್ಲ. ಸಿ.ಟಿ.ರವಿ ಅವರು ಹಾಗೆ ಹೇಳಲು ಅವರ ಬಳಿ ಮಾಹಿತಿ ಏನಿದೆಯೋ ನನಗೆ ಗೊತ್ತಿಲ್ಲ. ಆದರೆ ಡಿಕೆಶಿ ಅವರು ಎತ್ತಿನಹೊಳೆ ಯೋಜನೆಯನ್ನು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ. ಎಲ್ಲರೂ ಎತ್ತಿನಹೊಳೆ ಯೋಜನೆಗೆ ಶ್ರಮಿಸಿದ್ದಾರೆ. ಎಲ್ಲರಿಗೂ ಇದರ ಯಶಸ್ಸಿನ ಕೀರ್ತಿ ಸಿಗಬೇಕು. ಪ್ರಮಾಣ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು ಅಷ್ಟೇ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Advertisement