.jpg?w=480&auto=format%2Ccompress&fit=max)
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮೈಸೂರು ರಸ್ತೆಯ ಕಣಿಮಿಣಿಕೆ ವಸತಿ ಯೋಜನೆ ಕೇವಲ ಮೂರನೇ ಒಂದು ಭಾಗದಷ್ಟು ಮಾತ್ರ ಮಾರಾಟವಾಗಿದ್ದು, ರಾಜ್ಯ ಸರ್ಕಾರವು ರಚಿಸಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮಂಗಳವಾರ ಸ್ಥಳಕ್ಕೆ ಭೇಟಿ ನೀಡಲಿದೆ ಎನ್ನಲಾಗಿದೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದ್ದು, ಕಣಿಮಿಣಿಕೆ ವಸತಿಯಲ್ಲಿ ಈ ವರೆಗೂ ಕೇವಲ ಶೇ.30ರಷ್ಟು ಫ್ಲಾಟ್ ಗಳು ಮಾತ್ರ ಮಾರಾಟವಾಗಿದೆ. ಈ ಪ್ರದೇಶದಲ್ಲಿನ ವಸತಿ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳದೆ ಯೋಜನೆ ಮುಂದುವರೆಸಿರುವ ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ನೀಡಿತ್ತು.
ಇದೀಗ ಶಾಸಕರು ಮತ್ತು ಎಂಎಲ್‌ಸಿಗಳನ್ನು ಒಳಗೊಂಡ 20 ಸದಸ್ಯರ ಸಮಿತಿಯು ಸಿಎಜಿಯ ಶಿಫಾರಸ್ಸಿನ ಮೇರೆಗೆ ಸರ್ಕಾರದ ನಿಧಿಯ ಹಣಕಾಸು ವಿನಿಯೋಗದ ಆರೋಪಗಳನ್ನು ಪರಿಶೀಲಿಸಲಿದೆ ಎನ್ನಲಾಗಿದೆ.
ವರದಿ ಅಲ್ಲಗಳೆದ ಬಿಡಿಎ
ಇನ್ನು ಸಿಎಜಿ ವರದಿ ಸರಿಯಲ್ಲ ಎಂದು ಸ್ಪಷ್ಟನೆ ನೀಡಿರುವ ಬಿಡಿಎ ಹಿರಿಯ ಅಧಿಕಾರಿಯೊಬ್ಬರು, "ಈ ಹಿಂದೆ ನಾವು FREI ಏಜೆನ್ಸಿ ಮೂಲಕ ಮಾರುಕಟ್ಟೆ ಸಂಶೋಧನೆ ನಡೆಸಿದ್ದೇವೆ. ಬಿಡದಿ, ಕುಂಬಳಗೋಡು ಮತ್ತು ಹೆಜ್ಜಾಲದಲ್ಲಿ ಬಿಡಿಎ ಫ್ಲಾಟ್‌ಗಳಿಗೆ ಬೇಡಿಕೆ ಇದೆ ಎಂದು ಅದು ಬಹಿರಂಗಪಡಿಸಿದೆ, ನಂತರ ನಾವು ಯೋಜನೆಗೆ ಮುಂದಾಗಿದ್ದೇವು. ಈ ಸಂಶೋಧನಾ ವರದಿಗೆ ಸಿಎಜಿ ತಂಡಕ್ಕೆ ಪ್ರವೇಶವಿರಲಿಲ್ಲ. ನಾವು ಅದನ್ನು ನಂತರ ಅವರಿಗೆ ವಿವರಿಸಿದ್ದೇವೆ ಮತ್ತು ಪಿಎಸಿ ತಂಡಕ್ಕೂ ಪ್ರತಿಯನ್ನು ಕಳುಹಿಸಿದ್ದೇವೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಣ್ಮಿಣಿಕೆ ಹಂತ-II, III ಮತ್ತು IV ರಲ್ಲಿ ಮಾರಾಟವಾದ ಫ್ಲ್ಯಾಟ್‌ಗಳ ನಿಖರವಾದ ಸಂಖ್ಯೆಯನ್ನು ಬಿಡಿಎಯಲ್ಲಿ ಯಾರೂ ನೀಡಲು ಸಾಧ್ಯವಾಗಿಲ್ಲ. ಹಿರಿಯ ಅಧಿಕಾರಿಯೊಬ್ಬರು, "1050 ಫ್ಲಾಟ್‌ಗಳಲ್ಲಿ ಸುಮಾರು 350 ಮಾರಾಟವಾಗಿವೆ. ಅವರಲ್ಲಿ ಹೆಚ್ಚಿನವರು 2BHK ಗಳು ಮತ್ತು ಇತರರು 3BHK ಗಳು. ಇವು ರೌಂಡ್-ಅಪ್ ಅಂಕಿಅಂಶಗಳು. ಕಣ್ಮಿಣಿಕೆ ಹಂತ-5 ಪೂರ್ಣಗೊಂಡಿದ್ದರೂ, ಗುತ್ತಿಗೆದಾರರು ಮಧ್ಯದಲ್ಲಿಯೇ ಕೈಬಿಟ್ಟ ನಂತರ ಕಣ್ಮಿಣಿಕೆ ಹಂತ-1 ಯೋಜನೆಯನ್ನು ಕೈಬಿಡಲಾಗಿದ್ದು, ಸಾರ್ವಜನಿಕರಿಗೆ ಇದು ಮುಕ್ತವಾಗಿಲ್ಲ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಅಧಿಕಾರಿ ಮಾತನಾಡಿ, ನಾವು ಈ ಫ್ಲಾಟ್‌ಗಳಿಗಾಗಿ ಸುಮಾರು 300 ಕೋಟಿ ರೂ. ವ್ಯಯಿಸಿದ್ದೇವೆ. ಬೇಡಿಕೆ ಇಲ್ಲದ ಕಾರಣ ನಮ್ಮ ಹಣ ಅದರಲ್ಲಿ ಸಿಲುಕಿಕೊಂಡಿದೆ. ನಾವು ಎಲ್ಲವನ್ನೂ ಮಾರಾಟ ಮಾಡವಲ್ಲಿ ಯಶಸ್ವಿಯಾದರೆ, ನಮಗೆ 450 ಕೋಟಿ ರೂ. ಬರುತ್ತದೆ. ಅಂದರೆ 150 ಕೋಟಿ ರೂ ಲಾಭಾಂಶ ಸಿಗಲಿದೆ ಎಂದು ಹೇಳಿದ್ದಾರೆ.
ರಸ್ತೆ ಸಂಪರ್ಕ ಇಲ್ಲ
ಇನ್ನು ಮೈಸೂರು ರಸ್ತೆಯಿಂದ ಫ್ಲ್ಯಾಟ್‌ಗಳವರೆಗಿನ 850 ಮೀಟರ್‌ಗೆ ನೇರ ಸಂಪರ್ಕ ರಸ್ತೆಯನ್ನು ಬಿಡಿಎ ಒದಗಿಸದಿರುವುದು ಮಾರಾಟದ ಮಂದಗತಿಗೆ ಪ್ರಮುಖ ಕಾರಣವಾಗಿದೆ. ಈ ರಸ್ತೆಯನ್ನು ಐದು ವರ್ಷಗಳ ಹಿಂದೆಯೇ ಯೋಜಿಸಲಾಗಿತ್ತು. ಹೆಜ್ಜಾಲದಿಂದ ಜುಡಿಶಿಯಲ್ ಲೇಔಟ್ ಮೂಲಕ ಫ್ಲಾಟ್‌ಗಳಿಗೆ ರಸ್ತೆ ಇದೆ, ಆದರೆ ಇದು ಉದ್ದವಾದ ಮಾರ್ಗವಾಗಿದೆ ಮತ್ತು ನೇರ ಪ್ರವೇಶ ರಸ್ತೆಯನ್ನು ಬಯಸುವ ಸಂಭಾವ್ಯ ಮನೆ ಖರೀದಿದಾರರು ಇದನ್ನು ಇಷ್ಟಪಡುವುದಿಲ್ಲ ಎಂದು ಅಧಿಕಾರಿ ಹೇಳಿದರು.
ಇಂಜಿನಿಯರಿಂಗ್ ವಿಭಾಗದ ಅಧಿಕಾರಿಯೊಬ್ಬರು ಮಾತನಾಡಿ, "ಹೊಸ ಸರ್ವಿಸ್ ರಸ್ತೆ ನಿರ್ಮಿಸಲು ಯೋಜನೆ ರೂಪಿಸಿದ್ದು, ಭೂಸ್ವಾಧೀನ ಮಾಡಿಕೊಳ್ಳುವ ಜಾಗವನ್ನು ಗುರುತಿಸಲಾಗಿದೆ. ರೈತರೊಂದಿಗೂ ಮಾತುಕತೆ ನಡೆಸಿದ್ದೇವೆ. ಈಗಾಗಲೇ ಜಾರಿಯಲ್ಲಿರುವ ಹೊಸ ಸರ್ವಿಸ್ ರಸ್ತೆಗೆ ಇದು ಪೂರಕವಾಗಲಿದೆ. ಅವರಿಗೆ ಆದ್ಯತೆ ನೀಡಿದರೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಪರ್ಯಾಯ ನಿವೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.
Advertisement