ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ವಿಷಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ್ದ ಗಡುವು ಪೂರ್ಣಗೊಂಡಿದ್ದರೂ ಒಂದಷ್ಟು ರಸ್ತೆಗಳು ಡಾಂಬರು ಕಂಡಿದ್ದು ಬಿಟ್ಟರೆ, ಹಲವು ರಸ್ತೆಗಳು ಇನ್ನೂ ಗುಂಡಿಗಳಿಂದ ಮುಕ್ತವಾಗಿಲ್ಲ.
ತಮ್ಮ ಪ್ರದೇಶಗಳಲ್ಲಿ ಹಾಗೂ ತಾವು ಸಂಚರಿಸುವ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲಸವನ್ನು ಪಾಲಿಕೆ ಮಾಡುತ್ತಿದೆ. ಆದರೆ, ಇನ್ನೂ ಸಾಕಷ್ಟು ಗುಂಡಿಗಳಿದ್ದು, ಆ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ನಾಗರೀಕರು ಬೇಸರ ವ್ಯಕ್ತಪಡಿಸಿದ್ದಾರೆ.
ಡಿಕೆ.ಶಿವಕುಮಾರ್ ಅವರು ಗುಂಡಿ ಮುಚ್ಚಲು 15 ದಿನಗಳ ಕಾಲ ಅವಕಾಶ ನೀಡಿದ್ದರು. ಆ ಗಡುವು ಪೂರ್ಣಗೊಂಡಿದ್ದು, ಇದೀಗ ಡಿಸಿಎಂ ಸ್ವತಃ ನಗರ ಪ್ರದಕ್ಷಿಣೆ ನಡೆಸಿ, ವಿಫಲರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲ ಅಧಿಕಾರಿಗಳಿಗೆ ಶಿಕ್ಷೆಯಾದರೆ, ಉಳಿದವರಿಗೆ ಬುದ್ಧಿ ಬರಲಿದೆ, ಬಳಿಕ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆಂದು ಹೇಳಿದ್ದಾರೆ.
ವಿದೇಶಕ್ಕೆ ತೆರಳುವುದಕ್ಕೂ ಮುನ್ನ ಡಿಕೆ.ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿ 15 ದಿನಗಳೊಳಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ತಾಕೀತು ಮಾಡಿದ್ದರು. ವಿಫಲರಾಗಿದ್ದೇ ಆದರೆ, ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು.
ವಿದೇಶಕ್ಕೆ ಭೇಟಿ ನೀಡಿದ ಬಳಿಕವೂ ಉಪ ಮುಖ್ಯಮಂತ್ರಿಗಳು ಬಿಬಿಎಂಪಿ ಕಾರ್ಯಗಳ ಮೇಲೆ ನಿಗಾ ಇರಿಸಿದ್ದರು. ಅಲ್ಲದೆ, ಬಿಬಿಎಂಪಿ ನಡೆಸುತ್ತಿದ್ದ ದುರಸ್ತಿ ಕಾರ್ಯಗಳ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಿದ್ದರು.
ಇದೇ ವೇಳೆ ನ್ಯೂಯಾರ್ಕ್ ನ ಸ್ಕೈಡೆಕ್ ಕುರಿತು ಡಿಸಿಎಂ ಪೋಸ್ಟ್ ಮಾಡಿದ್ದು, ಇದಕ್ಕೆ ನಾಗರೀಕರು ಮೊದಲು ರಸ್ತೆಗಳನ್ನು ಸುಧಾರಿಸಿ, ಬೊಮ್ಮನಹಳ್ಳಿಯಲ್ಲಿರುವ ರಸ್ತೆ ಗುಂಡಿಗಳ ಸರಿಪಡಿಸಿ ಎಂದು ಆಗ್ರಹಿಸಿದ್ದರು.
ಈ ನಡುವೆ ಬಿಬಿಎಂಪಿ ಕಾಮಗಾರಿಯ ಮೇಲ್ವಿಚಾರಣೆ ನಡೆಸಿದ ವಲಯ ಆಯುಕ್ತೆ ರಮ್ಯಾ ಅವರು, ಹಗಲು ರಾತ್ರಿ ಎನ್ನದೆ ಕಾಮಗಾರಿ ನಡೆಯುತ್ತಿದ್ದು, ಹೆಚ್ಚೆಚ್ಚು ವಾಹನಗಳು ಓಡಾಡುವ ರಸ್ತೆ ಹಾಗೂ ಪ್ರದೇಶಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
Advertisement