ಬೆಂಗಳೂರು: ರಕ್ಷಣಾ ಸಚಿವಾಲಯದೊಂದಿಗೆ ಸಂಯೋಜಿತವಾಗಿರುವ ನಗರದ ಸೈನಿಕ ಶಾಲೆಯೊಂದಕ್ಕೆ ಬುಧವಾರ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತದ ನಂತರ ಶಾಲಾ ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಅದೊಂದು ಹುಸಿ ಬಾಂಬ್ ಬೆದರಿಕೆ ಎಂದು ದೃಢಪಡಿಸಲಾಯಿತು.
ಮಧ್ಯಾಹ್ನ 12.30 ರ ಸುಮಾರಿಗೆ ಶಾಲಾ ಆವರಣದಲ್ಲಿ ಸ್ಪೋಟಕ ಇಡಲಾಗಿದೆ ಎಂದು ಶಾಲೆಗೆ ಅನಾಮಧೇಯ ಇಮೇಲ್ ಬಂದಿದೆ. ಇದರಿಂದ ಆತಂಕಕ್ಕೀಡಾದ ಶಾಲಾ ಆಡಳಿತ ಮಂಡಳಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್, ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ದಳ ಶಾಲಾ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂದು ಘೋಷಿಸಲಾಯಿತು. ಈ ಸಂಬಂಧ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆಗಸ್ಟ್ 29 ರಂದು ಮಾನ್ಯತಾ ಟೆಕ್ ಪಾರ್ಕ್ ಎದುರಿನ ಖಾಸಗಿ ಶಾಲೆಗೆ ಇದೇ ರೀತಿಯ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಮೇ ತಿಂಗಳಲ್ಲಿ ನಗರದ ಎಂಟು ಶಾಲೆಗಳು, ಕಳೆದ ವರ್ಷ ಡಿಸೆಂಬರ್ 1 ರಂದು ಬೆಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ಬೆಂಗಳೂರು ಗ್ರಾಮಾಂತರ ಪೊಲೀಸ್ ವ್ಯಾಪ್ತಿಯ 68 ಶಾಲೆಗಳಿಗೆ ಇದೇ ರೀತಿಯ ಬೆದರಿಕೆ ಇಮೇಲ್‌ಗಳು ಬಂದಿದ್ದವು. ಈ ಪ್ರಕರಣಗಳ ತನಿಖೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.
Advertisement