ಕರ್ನಾಟಕ ಸುವರ್ಣ ಸಂಭ್ರಮ-50 ಸಮಾರೋಪ: ಮನೆ-ಮನೆಯಲ್ಲಿ ಕನ್ನಡ ಬಾವುಟ ಹಾರಿಸುವಂತೆ ಸಿಎಂ ಮನವಿ
ಬೆಂಗಳೂರು: ಕರ್ನಾಟಕ ಸುವರ್ಣ ಸಂಭ್ರಮ-50ರ ಸಮಾರೋಪ ಸಮಾರಂಭವನ್ನು ಕನ್ನಡ ಜನೋತ್ಸವವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಮನೆ ಮನೆಯಲ್ಲಿ ಕನ್ನಡ ಬಾವುಟವನ್ನು ಹಾರಿಸಲು ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು.
ಗುರುವಾರ ನಗರದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ-2024 ಪ್ರದಾನ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ-50 ಸಮಾರೋಪ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಜನಪದ, ಚರಿತ್ರೆ ಎಲ್ಲದರ ಮಹತ್ವ ಸಾರಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಈ ವರ್ಷ ಕರ್ನಾಟಕ ಸರ್ಕಾರ 69 ಗಣ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಅಥವಾ ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕನ್ನಡ ಮತ್ತು ಸಂಸ್ಕೃತಿ ಸಚಿವರು ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುತ್ತಾರೆಂದು ತಿಳಿಸಿದರು.
ರಾಜ್ಯಾದ್ಯಂತ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮಗಳು ನಡೆಯುತ್ತಿವೆ. ಹಂಪಿಯಿಂದ ಆರಂಭವಾದ ಕನ್ನಡ ರಥ ಇದುವರೆಗೆ 28 ಜಿಲ್ಲೆಗಳಲ್ಲಿ ಸಂಚರಿಸಿ, ಇದೀಗ ರಥಯಾತ್ರೆಯ ಸಮಾರೋಪ ಸಮಾರಂಭ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆಯಲಿದೆ.
ವಿಶೇಷ ಎಂದರೆ ಕರ್ನಾಟಕ ಸುವರ್ಣ ಸಂಭ್ರಮ – 50 ಸಮಾರೋಪ ಸಮಾರಂಭ ವಿಧಾನ ಸೌಧದ ಮುಂಭಾಗ ನಡೆಯಲಿದ್ದು, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಹ ಇದೇ ಸಂದರ್ಭದಲ್ಲಿ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಮೈಸೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಪ್ರತಿಮೆ ಸ್ಥಾಪನೆಗೆ ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಸಿಎಂ ಮಾಹಿತಿ ನೀಡಿದ್ದು, ಬಳ್ಳಾರಿಯಲ್ಲಿ ರಂಜಾನ್ ಸಾಬ್ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು. ಅಲ್ಲದೆ, ಧಾರವಾಡದಲ್ಲಿ ಅದರಗುಂಚಿ ಶಂಕರಗೌಡ ಸ್ಮಾರಕ ನಿರ್ಮಿಸಲು ಅಂದಾಜು ವೆಚ್ಚ ಸಲ್ಲಿಸಲಾಗಿದ್ದು, ಗದಗದಲ್ಲಿ ಅಂದಾನಪ್ಪ ದೊಡ್ಡ ಮೇಟಿ ಸ್ಮಾರಕ ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಿದರು.
ಇದರ ಹೊರತಾಗಿ 50 ಸಾಧಕ ಮಹಿಳೆಯ ಕುರಿತು 100 ಪುಟಗಳ 50 ಕೃತಿಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಲಕ ಮುದ್ರಿಸಲು ಮುಂದಾಗಿದ್ದು, ವಿಧಾನಸೌಧ ಆವರಣದಲ್ಲಿ 25 ಅಡಿ ಎತ್ತರದ ಭುವನೇಶ್ವರಿದೇವಿ ಕಂಚಿನ ಪ್ರತಿಮೆ ಕಾಮಗಾರಿ ಪ್ರಗತಿಯಲ್ಲಿದ್ದು, ನವೆಂಬರ್ 1ರಂದು ಅನಾವರಣ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದರು.
ಅಷ್ಟೇ ಅಲ್ಲದೆ, ರಾಜ್ಯದ ನಾಲ್ಕು ವಲಯಗಳಲ್ಲಿ ವಿಶೇಷ ಕಾರ್ಯಕ್ರಮ ಮಾಡಲು ಪ್ಲಾನ್ ಮಾಡಿದ್ದು, ಮೈಸೂರಿನಲ್ಲಿ ಚಿಂತನಾ ಸಮಾವೇಶ, ರಾಯಚೂರಿಗೆ ಗೋಕಾಕ್ ಚಳವಳಿ ಸಂಸ್ಮರಣೆ, ಮಹಾರಾಷ್ಟ್ರದ ಜತ್ ತಾಲೂಕಿನಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವ ಮತ್ತು ಮಂಗಳೂರಿನಲ್ಲಿ ವಿವಿಧ ಅಕಾಡೆಮಿ ಸಹಯೋಗದಲ್ಲಿ ಬಹುಸಂಸ್ಕೃತಿ ಉತ್ಸವ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ