
ಬೆಂಗಳೂರು: ಶವವನ್ನು ತುಂಡರಿಸಿ ರೆಫ್ರಿಜರೇಟರ್‌ನಲ್ಲಿ ತುಂಬಿದ್ದ ಮಹಾಲಕ್ಷ್ಮಿ ಅವರ ಭೀಕರ ಹತ್ಯೆ ಘಟನೆಯು ಜನಸಾಮಾನ್ಯರನ್ನು ಮಾತ್ರವಲ್ಲದೆ, ನಿತ್ಯವೂ ಶವಪರೀಕ್ಷೆ ನಡೆಸುವ ವಿಧಿವಿಜ್ಞಾನ ತಜ್ಞರನ್ನೂ ಬೆಚ್ಚಿ ಬೀಳಿಸಿದೆ,
ಹತ್ಯೆಯಾಗಿರುವ ಮಹಾಲಕ್ಷ್ಮೀ ಅವರ ಮೃತದೇಹವನ್ನು 40ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಲಾಗಿದ್ದು, ಈ ಮೃತದೇಹದ ಬಿಡಿಭಾಗಗಳನ್ನು ಮರುಜೋಡಿಸಿ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ.
ಇದು ಖಂಡಿತವಾಗಿಯೂ ಅಪರೂಪದ ಪ್ರಕರಣವಾಗಿದೆ, ನನ್ನ 25 ವರ್ಷಗಳ ವೃತ್ತಿಜೀವನದಲ್ಲಿ ಇಂತಹ ಘಟನೆಯನ್ನು ನೋಡಿಲ್ಲ ಎಂದು ಫೋರೆನ್ಸಿಕ್ ರೋಗಶಾಸ್ತ್ರಜ್ಞರು ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ 10 ತುಂಡುಗಳಾಗಿ ಕತ್ತರಿಸಿದ್ದ ಮೃತದೇಹದ ಶವಪರೀಕ್ಷೆ ನಡೆಸಿದ್ದೆ. ಆದರೆ, ಈಪ್ರಕರಣಗಳಲ್ಲಿ ನಿಖರವಾದ ವರದಿ ನೀಡುವುದು ತುಸು ಕಷ್ಟ, ಛಿದ್ರಗೊಂಡ ದೇಹದ ಪ್ರತಿಯೊಂದು ಭಾಗವನ್ನು ಪರೀಕ್ಷೆ ನಡೆಸಬೇಕಿದೆ.
ಶವಪರೀಕ್ಷೆಯ ಉದ್ದೇಶವೆಂದರೆ ಸಾವಿನ ಕಾರಣವನ್ನು ಕಂಡುಹಿಡಿಯುವುದು. ಕೊಲೆ ಪ್ರಕರಣಗಳಲ್ಲಿ ದೇಹವನ್ನು ತುಂಡುಗಳಾಗಿ ಕತ್ತರಿಸದಿದ್ದರೆ ಅದು ಸುಲಭದ ಕೆಲಸವಾಗುತ್ತದೆ, ಪರೀಕ್ಷೆ ವೇಳೆ ನಾವು ಮೃತದೇಹದ ಮೇಲೆ ಇರಿತದ ಗಾಯಗಳು, ಗುರುತುಗಳು, ಮುರಿತಗಳು ಅಥವಾ ತಪ್ಪಿಸಿಕೊಳ್ಳಲು ಯತ್ನಿಸುವ ವೇಳೆ ಆಗುವ ಚಿಹ್ನೆಗಳನ್ನು ಗುರುತಿಸುತ್ತೇವೆ. ಗಾಯದ ಗುರುತುಗಳಿಂದ ಕೊಲೆ ಮಾಡಲು ಬಳಸಿದ ಆಯುಧವನ್ನೂ ಕೂಡ ನಾವು ತಿಳಿಯಬಹುದು. ಆದರೆ, ಈ ಪ್ರಕರಣದಲ್ಲಿ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯುವುದು ತುಂಬಾ ಕಷ್ಟ ಎಂದು ಮತ್ತೊಬ್ಬ ವೈದ್ಯರು ಹೇಳಿದ್ದಾರೆ.
ಹೃದಯ, ಕಿಡ್ನಿ ಮುಂತಾದ ಅಂಗಾಂಗಗಳು ಹಾಗೇ ಇದ್ದರೆ ಅವುಗಳನ್ನು ಪರೀಕ್ಷಿಸಬೇಕಾಗುತ್ತದೆ. ಮೂಳೆ ಮುರಿತಗಳು ಸಾವಿನ ಕಾರಣವನ್ನು ಕಂಡುಹಿಡಿಯಲು ಸಹ ಸಹಾಯ ಮಾಡುತ್ತದೆ. ದೇಹವನ್ನು ಛಿದ್ರಗೊಳಿಸಿರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ ಎಂದು ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ.
ನಿರ್ದಿಷ್ಟ ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆಯನ್ನು ನಡೆಸುವುದು ಅಗತ್ಯವಿದ್ದು, ಇದರಿಂದ ಇತರ ವಿಧಿವಿಜ್ಞಾನ ಪರೀಕ್ಷೆಗಳು ಮತ್ತು ತನಿಖಾಧಿಕಾರಿಗಳಿಗೆ ಸಾವಿನ ನಿಖರವಾದ ಕಾರಣವನ್ನು ತಿಳಿಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
Advertisement