ಕೊಪ್ಪಳ: ರಾಷ್ಟ್ರಧ್ವಜದ ಮೇಲಿದ್ದ ಅಶೋಕ ಚಕ್ರದ ಬದಲಿಗೆ ಅರೇಬಿಕ್ ಅಕ್ಷರಗಳನ್ನು ಹಾಕಿ ಧ್ವಜ ಹಾರಿಸಿದ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಕೊಪ್ಪಳ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಯಲಬುರ್ಗಾ ಪಟ್ಟಣದ ಮಹ್ಮದ್ ದಾನೀಶ್ ಕುತುಬುದ್ಧೀನ್ ಖಾಜಿ ಹಾಗೂ ಅವರ ಸಹೋದರ ಮಹ್ಮದ್ ಆದಿನಾನ್ ಖಾಜಿ ಬಂಧಿತ ಯುವಕರು.
ಈದ್ ಮಿಲಾದ್ ಆಚರಣೆ ವೇಳೆ ಬಟ್ಟೆಯಿಂದ ತ್ರಿವರ್ಣ ಧ್ವಜ ಹೊಲಿದು ಬಿಳಿಬಣ್ಣದ ಜಾಗದಲ್ಲಿ ಅಶೋಕ ಚಕ್ರದ ಬದಲಿಗೆ ಅರೇಬಿಕ್ ಅಕ್ಷರದಲ್ಲಿ ‘ಲಾ ಇಲ್ಲಾಹ ಇಲ್ಲಾಲ್ಲಾ ಮೊಹಮದ್ ರಸೂಲಲ್ಲಾ’ ಎಂದು ಬರೆಯಲಾಗಿತ್ತು. ಧ್ವಜವನ್ನು ವಿರೂಪಗೊಳಿಸಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಅಲ್ಲದೆ, ಬಿ.ಬಿ.ಫಾತಿಮಾ ದರ್ಗಾದ ಮೇಲೆ ಅರೇಬಿಕ್ ಅಕ್ಷರಗಳುಳ್ಳ ತ್ರಿವರ್ಣ ಧ್ವಜ ಹಾರಾಡುತ್ತಿದೆ ಎಂದು ಕೆಲವರು ಶನಿವಾರ ಯಲಬುರ್ಗಾ ಪೊಲೀಸರಿಗೆ ದೂರು ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ದರ್ಗಾದ ಅಧಿಕಾರಿಗಳನ್ನು ಧ್ವಜ ತೆಗೆಯುವಂತೆ ಸೂಚಿಸಿದರು. ಬಳಿಕ ಧ್ವಜವನ್ನು ವಿರೂಪಗೊಳಿಸಿದ್ದ ಮೊಹಮ್ಮದ್ ದಾನಿಶ್ ಕುತುಬುದ್ದೀನ್ ಖಾಝಿ ಮತ್ತು ಆತನ ಸಹೋದರ ಮೊಹಮ್ಮದ್ ಅದಿನಾನ್ ಖಾಜಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡರು.
ಈ ನಡುವೆ ಕಳೆದ ಕೆಲವು ದಿನಗಳಿಂದ ಕೋಮುಗಲಭೆಗಳು ನಡೆಯುತ್ತಿದ್ದು, ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡುವಂತೆ ಜಿಲ್ಲೆಯ ನಿವಾಸಿಗಳು ಮನವಿ ಮಾಡಿದ್ದಾರೆ.
ಕಳೆದ ವಾರ ಈದ್ ಮಿಲಾದ್ ಸಂದರ್ಭದಲ್ಲಿ ಹಿಂದೂ ಸಂಘಟನೆಯೊಂದು ‘ಫ್ರೀ ಪ್ಯಾಲೆಸ್ತೀನ್’ ಎಂದು ಬರೆದಿದ್ದ ಬ್ಯಾನರ್ ವಿರುದ್ಧ ಪ್ರತಿಭಟನೆ ನಡೆಸಿತ್ತು. ಆಕ್ಷೇಪ ಬೆನ್ನಲ್ಲೇ ಬ್ಯಾನರ್ ತೆಗೆಯಲಾಗಿತ್ತು.
ಏತನ್ಮಧ್ಯೆ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಮುಸ್ಲಿಂ ಮತ್ತು ಹಿಂದೂ ಸಮಾಜದ ಮುಖಂಡರು ಕೋಮು ಸೌಹಾರ್ದ ಸಭೆ ನಡೆಸುತ್ತಿದ್ದಾರೆ.
ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ ಕುರಿತು ಜಾಗೃತಿ ಮೂಡಿಸುತ್ತಿರುವ ಕನ್ನಡ ಸಾಹಿತಿ, ಕವಿ ಶಿವಕುಮಾರ ಹಿರೇಮಠ ಮಾತನಾಡಿ, ನಮ್ಮಲ್ಲಿ ಶಾಂತಿ, ಕೋಮು ಸೌಹಾರ್ದತೆ ಬಯಸುವ ಅನೇಕ ಜನರಿದ್ದಾರೆ. ಆದರೆ. ಅಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಂತಹ ನಡೆಗಳಿಗೆ ಅಡೆತಡೆಗಳನ್ನುಂಟು ಮಾಡುವ ಜನರೂ ಕೂಡ ಇದ್ದಾರೆಂದು ಹೇಳಿದ್ದಾರೆ.
ನಾವು ಎಲ್ಲಾ ಸಮುದಾಯಗಳ ಮುಖಂಡರು ಮತ್ತು ಹಿರಿಯ ನಾಗರಿಕರನ್ನು ಭೇಟಿ ಮಾಡುತ್ತಿದ್ದೇವೆ, ಶಾಂತಿ ಸಭೆಗಳನ್ನು ನಡೆಸುವಂತೆ ಮತ್ತು ಹಬ್ಬಗಳ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಮತ್ತು ಕೋಮುಗಲಭೆ ಸೃಷ್ಟಿಸಲು ಈ ಕಾರ್ಯಕ್ರಮಗಳನ್ನು ಬಳಸದಂತೆ ಕೇಳಿಕೊಳ್ಳುತ್ತಿದ್ದೇವೆಂದು ತಿಳಿಸಿದ್ದಾರೆ.
Advertisement