ಬೆಂಗಳೂರು: ಮಹಾಲಕ್ಷ್ಮಿ ಅವರ ದೇಹವನ್ನು 59 ತುಂಡುಗಳಾಗಿ ಕತ್ತರಿಸಿದ ಹಂತಕ, ಮನೆಯಲ್ಲಿ ರಕ್ತದ ಕಲೆಗಳಿಲ್ಲದಂತೆ ಮಾಡಲು ಕೆಮಿಕಲ್ ಬಳಸಿ ಸ್ವಚ್ಛಗೊಳಿಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆಯ ಭೀಕರ ಹತ್ಯೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಹತ್ಯೆ ನಡೆದ ಸ್ಥಳದಲ್ಲಿ ಪ್ರತಿಯೊಂದು ಅಂಶವನ್ನು ಪರಿಶೀನೆ ನಡೆಸುತ್ತಿದ್ದಾರೆ.
ತನಿಖೆ ವೇಳೆ ಹಂತಕ ಮಹಿಳೆಯ ದೇಹವನ್ನು 59 ತುಂಡುಗಳಾಗಿ ಕತ್ತರಿಸಿದ್ದರೂ, ಮನೆಯ ನೆಲ ಅಥವಾ ಗೋಡೆಗಳ ಮೇಲೆ ಯಾವುದೇ ರಕ್ತದ ಕಲೆಗಳು ಬಂದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿ ಮಹಿಳೆಯ ದೇಹವನ್ನು ತುಂಡು ಮಾಡಿ, ನಂತರ ಮನೆಯನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿದ್ದಾನೆ. ಮನೆಯ ಸ್ಥಿತಿಯನ್ನು ನೋಡಿದರೆ ಹೊರಗಿನಿಂದ ಹತ್ಯೆ ಮಾಡಿ ಮನೆಯಲ್ಲಿರಿಸಿರುವಂತೆ ಭಾಸವಾಗುವಂತಿದೆ. ಹಂತಕ ರಾಸಾಯನಿಕ ಬಳಸಿ ಮನೆಯನ್ನು ಸ್ವಚ್ಛಗೊಳಿಸಿದ್ದೇನೆ. ಅಲ್ಲದೆ, ಹೊರಗಿನಿಂದ ಸೂಟ್ ಕೇಸ್ ತಂದು ದೇಹದ ತುಂಡುಗಳನ್ನು ಅದರಲ್ಲಿಟ್ಟು ಸಾಗಿಸಲು ಯತ್ನಿಸಿದ್ದಾನೆ. ಅದು ಸಾಧ್ಯವಾಗದಿದ್ದಾಗ ಮನೆಯ ಫ್ರಿಡ್ಜ್ ನಲ್ಲಿಟ್ಟು, ಸ್ನಾನ ಮಾಡಿ ಪರಾರಿಯಾಗಿದ್ದಾನೆ. ಈ ಬೆಳವಣಿಗೆಯನ್ನು ನೋಡಿದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಎನಿಸುತ್ತಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಪೊಲೀಸರು ಸೋಮವಾರ ದೇಹದ ಭಾಗಗಳನ್ನು ತುಂಬಿದ ರೆಫ್ರಿಜರೇಟರ್ ಅನ್ನು ಎಫ್‌ಎಸ್‌ಎಲ್‌ಗೆ ರವಾನಿಸಿದ್ದು, ಹಂತಕನಿಗಾಗಿ ಹುಡುಕಾಟವನ್ನು ಮುಂದುವರೆಸಿದ್ದಾರೆ.
ಆರೋಪಿ ಪಶ್ಚಿಮ ಬಂಗಾಳದಲ್ಲಿರುವ ಶಂಕೆ
ಈ ನಡುವೆ ಆರೋಪಿ ಆರೋಪಿ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಆತ ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಂಡಿರುವ ಶಂಕೆಗಳಿವೆ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸುಳಿವು ಮತ್ತು ಮಾಹಿತಿ ಸಂಗ್ರಹಿಸಿದ್ದು, ಈ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಈ ಅಪರಾಧ ಕೃತ್ಯದಲ್ಲಿ ನಂಟು ಹೊಂದಿರುವ ವ್ಯಕ್ತಿಯೊಬ್ಬ ಪಶ್ಚಿಮ ಬಂಗಾಳದಲ್ಲಿರುವುದಾಗಿ ತಿಳಿದುಬಂದಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಖಚಿತ ಮಾಹಿತಿ ನೀಡಲು ಸಾಧ್ಯವಿಲ್ಲ. ಪೊಲೀಸರು ಇತರೆ ಶಂಕಿತರನ್ನೂ ವಿಚಾರಣೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಮಾತನಾಡಿ, ಪೊಲೀಸರು ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಪ್ರಮುಖ ಶಂಕಿತನನ್ನು ಗುರುತಿಸಲಾಗಿದೆ, ಆದರೆ, ಅವನನ್ನು ಇನ್ನೂ ಬಂಧಿಸಿಲ್ಲ. ವಿಚಾರಣೆ ಬಳಿಕ ಮಾಹಿತಿ ನೀಡುತ್ತೇವೆಂದು ಹೇಳಿದರು.
ಶಂಕಿತ ಆರೋಪಿ ಪಶ್ಚಿಮ ಬಂಗಾಳದಲ್ಲಿದ್ದಾನೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ ಪೊಲೀಸ್ ತಂಡವನ್ನು ಆ ರಾಜ್ಯಕ್ಕೆ ರವಾನಿಸಲಾಗಿದೆ. ಶಂಕಿತ ಆರೋಪಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ನಾಪತ್ತೆಯಾಗಿದ್ದಾನೆಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಸಂತ್ರಸ್ತೆಯ ವಿಚ್ಛೇದಿತ ಪತಿ ಹೇಮಂತ್ ದಾಸ್ ಅವರು, ಅಶ್ರಫ್ ಎಂಬ ವ್ಯಕ್ತಿಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಆತನೊಂದಿಗೆ ಮಹಾಲಕ್ಷ್ಮಿ ಅನೈತಿಕ ಸಂಬಂಧವನ್ನು ಹೊಂದಿದ್ದಳು ಎಂದು ಹೇಳಿದ್ದಾರೆ.
ಅದರಂತೆ ಪೊಲೀಸರು ಅಶ್ರಫ್‌ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಮಹಿಳೆ ತನ್ನ ಸಂಪರ್ಕದಲ್ಲಿರಲಿಲ್ಲ ಎಂದು ಹೇಳಿದ್ದು, ಬಳಿಕ ಆತನನ್ನು ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.
ಸೋಮವಾರ, ಪೊಲೀಸರು ಅಶ್ರಫ್ ಮತ್ತು ಇತರ ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದು, ಅವರ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದ್ದಾರೆ. ಆದರೆ, ಅವರು ಕೆಲವು ತಿಂಗಳುಗಳಿಂದ ಮಹಾಲಕ್ಷ್ಮಿಯೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂದು ತಿಳಿದುಬಂದಿದ್ದು, ಹೀಗಾಗಿ ಅವರನ್ನು ಬಿಡುಗಡೆ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
Advertisement