ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ರಾಮನಗರಕ್ಕೆ ಸ್ಥಳಾಂತರ: ಡಿಸಿಎಂ ಡಿ.ಕೆ ಶಿವಕುಮಾರ್

ರಾಮನಗರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಭೂ ಮಂಜೂರಾತಿ ವಿಷಯ ಬಗೆ ಹರಿದಿದ್ದು, ಕಾಮಗಾರಿ ನಡೆಯುತ್ತಿದೆ.
ಡಿಸಿಎಂ ಡಿ.ಕೆ ಶಿವಕುಮಾರ್
ಡಿಸಿಎಂ ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು (ಆರ್‌ಜಿಯುಎಚ್‌ಎಸ್) ರಾಮನಗರ ಕ್ಯಾಂಪಸ್‌ಗೆ ಸ್ಥಳಾಂತರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಘೋಷಿಸಿದರು.

ರಾಮನಗರ ಮತ್ತು ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಕುರಿತು ಬುಧವಾರ ಸಭೆ ನಡೆಸಿದ ಬಳಿಕ ಉಪ ಮುಖ್ಯಮಂತ್ರಿಗಳು ಸುದ್ದಿಗಾರರ ಜತೆ ಮಾತನಾಡಿದರು.

ರಾಮನಗರ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಭೂ ಮಂಜೂರಾತಿ ವಿಷಯ ಬಗೆ ಹರಿದಿದ್ದು, ಕಾಮಗಾರಿ ನಡೆಯುತ್ತಿದೆ. ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಹಿಂದಿನ ಸರ್ಕಾರದ ಆದೇಶದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ. ಇದನ್ನು ಹಂತಹಂತವಾಗಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.

ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಬಜೆಟ್'ನಲ್ಲಿ ಘೋಷಣೆ ಮಾಡಲಾಗಿತ್ತು. ಗೃಹ ಮಂಡಳಿಯಿಂದ ಜಮೀನು ಪಡೆದು ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುವುದು. ಕನಕಪುರದಲ್ಲಿ ಮೂಲಸೌಕರ್ಯ ಇಲ್ಲ ಎಂದು ಎನ್ಎಂಸಿಯಿಂದ ಅರ್ಜಿ ತಿರಸ್ಕರಿಸಲಾಗಿತ್ತು. ಹೀಗಾಗಿ ಮೂಲಸೌಕರ್ಯ ಹೆಚ್ಚಿಸಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಹಿಂದೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ಟೆಂಡರ್ ಕರೆದು ಭೂಮಿ ಪೂಜೆ ಮಾಡಲಾಗಿತ್ತು. ನಂತರ ಯಡಿಯೂರಪ್ಪನವರ ಸರ್ಕಾರದಲ್ಲಿ ಮಾಜಿ ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಆ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋದರು. ಆಗ ರೂ.450 ಕೋಟಿ ಇದ್ದ ಮೆಡಿಕಲ್ ಕಾಲೇಜು ನಿರ್ಮಾಣ ವೆಚ್ಚ ರೂ.850 ಕೋಟಿಗೆ ಏರಿಕೆಯಾಗಿದೆ.

ಬಿಜೆಪಿ ದ್ವೇಷದ ರಾಜಕಾರಣ ಮಾಡಿದೆ. ನಾವು ಬಜೆಟ್'ನಲ್ಲಿ ಇದನ್ನು ಘೋಷಿಸಿದ್ದು, ಇದನ್ನು ಹಂತ ಹಂತವಾಗಿ ಪೂರ್ಣಗೊಳಿಸುತ್ತೇವೆ. ಕಾಲೇಜು ನಿರ್ಮಾಣಕ್ಕೆ ಅನುಮತಿ ನೀಡುವಂತೆ ಮರು ಅರ್ಜಿ ಹಾಕುತ್ತೇವೆ. ರಾಮನಗರದಲ್ಲಿನ ಕಟ್ಟಡ ಕಾಮಗಾರಿಗೆ ರೂ.600 ಕೋಟಿ ಬಿಡುಗಡೆಯಾಗಿದ್ದು, ಕೆಲಸ ಭರದಿಂದ ಸಾಗುತ್ತಿದೆ. ನಾವು ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ರಾಜೀವ್ ಗಾಂಧಿ ವಿವಿ ಕೇಂದ್ರ ಕಚೇರಿ ರಾಮನಗರದಲ್ಲಿ ನಿರ್ಮಾಣ ಮಾಡಬೇಕು ಎಂದು 2008ರಲ್ಲೇ ಸರ್ಕಾರದ ಆದೇಶ ಹೊರಡಿಸಿ ಬಿಲ್ ಮಂಡಿಸಲಾಗಿದೆ. ಇದನ್ನು ಹಂತ ಹಂತವಾಗಿ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.

ಡಿಸಿಎಂ ಡಿ.ಕೆ ಶಿವಕುಮಾರ್
ರಾಜ್ಯದ ಮೊದಲ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ: 2030ಕ್ಕೆ 60,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ

ಕರ್ನಾಟಕ ದೇಶದ ಪ್ರಮುಖ ಆರೋಗ್ಯ ಪ್ರವಾಸೋದ್ಯಮ ಕೇಂದ್ರ: ಡಿಸಿಎಂ

ಕರ್ನಾಟಕ ಭಾರತದ ಪ್ರಮುಖ ಆರೋಗ್ಯ ಪ್ರವಾಸೋದ್ಯಮ ಕೇಂದ್ರವಾಗಿದ್ದು, ದೇಶದಲ್ಲೇ ಅತೀ ಹೆಚ್ಚು 70 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ ಎಂದು ಡಿಕೆ.ಶಿವಕುಮಾರ್ ಅವರು ಹೇಳಿದರು.

ನಗರದ ವೈಟ್‌ಫೀಲ್ಡ್‌ನಲ್ಲಿ ಸಮಗ್ರ ಆರೋಗ್ಯ ಸೇವಾ ಸೌಲಭ್ಯ ಹೊಂದಿರುವ ಮೆಡಿಕವರ್‌ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಪ್ರತಿ ವರ್ಷ 13,000 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಾರೆ. 1 ಲಕ್ಷಕ್ಕೂ ಹೆಚ್ಚು ಅರೆವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಬೆಂಗಳೂರಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಮೆಡಿಕವರ್ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಒಂದು ಹೊಸ ಬದಲಾವಣೆ ತರುವಲ್ಲಿ ಮುಖ್ಯ ಪಾತ್ರ ವಹಿಸಲಿದ್ದು, ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ತನ್ನ ಆರೋಗ್ಯ ಸೇವೆ ಪ್ರಾರಂಭಿಸಿದೆ.

ಮುಂದಿನ ದಿನಗಳಲ್ಲಿ ದೇಶದ ಇತರೆ ರಾಜ್ಯಗಳಲ್ಲಿ ತನ್ನ ಸೇವೆ ವಿಸ್ತರಿಸಲಿದೆ. ನಮ್ಮ ದೇಶ ಹಾಗೂ ವಿಶ್ವದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ಇದರಿಂದ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಗಳು ಸಿಗುತ್ತಿವೆ. ಜನರ ಸೇವೆ ಮಾಡುವುದು ನಮ್ಮ ಮೂಲ ಧ್ಯೇಯ. ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಕರ್ನಾಟಕದಲ್ಲಿ ಹೆಚ್ಚಿನ ಆಸ್ಪತ್ರೆಗಳನ್ನು ನಿರ್ಮಿಸಲು ನಾವು ಕೈ ಜೋಡಿಸುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com