ಮುಡಾ ನಿವೇಶನ ಹಂಚಿಕೆ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯದ ಆದೇಶದ ಮೇರೆಗೆ ಪ್ರಥಮ FIR ದಾಖಲಿಸಿದ್ದಾರೆ. ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ A1 ಆರೋಪಿಯಾಗಿದ್ದರೆ, ಅವರ ಪತ್ನಿ ಪಾರ್ವತಿ A2 ಆರೋಪಿಯಾಗಿದ್ದಾರೆ. ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ A3, ಭೂ ಮಾಲೀಕ ದೇವರಾಜು A4 ಹಾಗೂ A5 ಇತರರು ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಸಿಎಂ ವಿರುದ್ದ ಪ್ರಕರಣ ದಾಖಲಿಸಲು ಯಾವುದೇ ಕಾನೂನು ತೊಡಕಿಲ್ಲ. ಆದರೂ ಅಧಿಕಾರಿಗಳು ತಡ ಮಾಡುತ್ತಿದ್ದಾರೆ. ಈ ಹಿನ್ನೆಲೆ ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಕರ್ನಾಟಕ ಹೈಕೋರ್ಟ್ನಲ್ಲಿ ಇಂದು ಅರ್ಜಿ ಸಲ್ಲಿಸುತ್ತೇವೆ ಎಂದು ಲೋಕಾಯುಕ್ತ ಕಚೇರಿ ಬಳಿ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದರು. ಮತ್ತೊಂದೆಡೆ ಇಂದು ಸಿದ್ದರಾಮಯ್ಯ ಮೈಸೂರಿಗೆ ತೆರಳಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಸ್ವಾಗತಕ್ಕೆ ಬಂದಿದ್ದ ಮುಡಾ ಅಧ್ಯಕ್ಷ ಕೆ. ಮರಿಗೌಡಗೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿ ಘೋಷಣೆ ಕೂಗಿದ್ದಾರೆ. ನಿಮ್ಮಿಂದ ಸಿದ್ದರಾಮಯ್ಯಗೆ ಈ ಸ್ಥಿತಿ ಬಂದಿದೆ ಎಂದು ಕಾರು ಹತ್ತಿಸಿ ಅಲ್ಲಿಂದ ವಾಪಾಸ್ ಕಳುಹಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ಮುಂದೂಡಿಕೆಯಾಗಿದೆ. ಬೆಂಗಳೂರು ಸೆಷನ್ ಕೋರ್ಟ್ ಇಂದು ವಿಚಾರಣೆ ನಡೆಸಿದ್ದು ಜಾಮೀನು ಸಿಗಲಿದೆ ಎಂದು ಭಾವಿಸಿದ್ದ ನಟ ದರ್ಶನ್‌ಗೆ ಮತ್ತೊಮ್ಮೆ ನಿರಾಸೆಯಾಗಿದೆ. ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದಿನ ಸೋಮವಾರಕ್ಕೆ ಮುಂದೂಡಿದೆ. ಇಂದೇ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡರ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಕೃತ್ಯದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಪಾತ್ರ ಹೆಚ್ಚು ಇಲ್ಲ. ಈ ಎಲ್ಲಾ ಕಾರಣಕ್ಕಾಗಿ ಜಾಮೀನು ನೀಡಬೇಕು ಎಂದು ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮುಕ್ತಾಯ ಮಾಡಿದ್ದು ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.
ಗಂಗೇನಹಳ್ಳಿ ಡಿನೋಟಿಫಿಕೆಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನೋಟಿಸ್ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಇಂದು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ. ಮುಂದಿನ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಸೋಮವಾರ ಬೇರೆ ಕೆಲಸ ಇರುವುದರಿಂದ ಇಂದೇ ವಿಚಾರಣೆಗೆ ಹಾಜರಾಗುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು. ದೆಹಲಿಯಿಂದ ರಾಜ್ಯಕ್ಕೆ ಆಗಮಿಸಿದ HDk ಏರ್‌ಪೋರ್ಟ್‌ನಿಂದ ನೇರವಾಗಿ ಲೋಕಾಯುಕ್ತ ಕಚೇರಿಗೆ ತೆರಳಿದರು. ಲೋಕಾಯುಕ್ತ ಅಧಿಕಾರಿಗಳು ಸತತ 2 ಗಂಟೆಗಳ ಕಾಲ ಕುಮಾರಸ್ವಾಮಿ ಅವರ ವಿಚಾರಣೆ ನಡೆಸಿದರು.
ತುಮಕೂರು-ಯಶವಂತಪುರ ಮೆಮು ರೈಲಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಇಂದು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ತುಮಕೂರು-ಯಶವಂತಪುರ ಜೊತೆಗೆ ಬಾಣಸವಾಡಿ-ತುಮಕೂರು ನಡುವೆ ಹೊಸ ಮೆಮು ರೈಲು ಸೇವೆ ಆರಂಭ ಮಾಡುವುದಾಗಿ ಭರವಸೆ ನೀಡಿದರು. ತುಮಕೂರು-ಯಶವಂತಪುರ ನಡುವಿನ ಹೊಸ ಮೆಮು ರೈಲು ಇಂದೇ ಸಂಚಾರ ಆರಂಭಿಸಲಿದ್ದು ಭಾನುವಾರ ಹೊರತುಪಡಿಸಿ ವಾರದ ಎಲ್ಲ ದಿನ ಸಂಚರಿಸಲಿದೆ. ತುಮಕೂರು-ಯಶವಂತಪುರ ಮೆಮು ರೈಲು ಪ್ರತಿದಿನ ಬೆಳಿಗ್ಗೆ 8.45ಕ್ಕೆ ತುಮಕೂರಿನಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಿದರೆ ಯಶವಂತಪುರದಿಂದ ಸಂಜೆ 5.40ಕ್ಕೆ ಹೊರಡುವ ರೈಲು ಸಂಜೆ 7.05ಕ್ಕೆ ತುಮಕೂರು ತಲುಪಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ಇದೀಗ ರಾಷ್ಟ್ರದ ಗಮನ ಸೆಳೆದಿದೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರತೀ ವರ್ಷ ನಡೆಯುವ 'ಅತ್ಯುತ್ತಮ ಪ್ರವಾಸಿ ಹಳ್ಳಿಗಳು; ಸ್ಪರ್ಧೆಯಲ್ಲಿ ಕುತ್ಲೂರು ಗ್ರಾಮವು 'ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ' ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಿದೆ. ಸೆಪ್ಟೆಂಬರ್ 27 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಮೂಲಕ ಒಂದು ಕಾಲದ ನಕ್ಸಲ್ ಪೀಡಿತ ಗ್ರಾಮವಾಗಿ ಗುರುತಿಸಿಕೊಂಡಿದ್ದ ಕುತ್ಲೂರು ಇದೀಗ ಪ್ರವಾಸೋದ್ಯಮ ಸಚಿವಾಲಯ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Advertisement