ಬೆಂಗಳೂರು: 30 ದಿನಗಳಲ್ಲಿ ಬೆಂಗಳೂರು ದಕ್ಷಿಣದ ಸೋಂಪುರ ಕೆರೆ ಸಮಸ್ಯೆಯನ್ನು ಪರಿಹರಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧಿಕಾರಿಗಳಿಗೆ ಲೋಕಾಯುಕ್ತ ಸೂಚನೆ ನೀಡಿದೆ.
ಬನಶಂಕರಿ 6ನೇ ಹಂತದ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎಸ್.ಮಹೇಶ ಮಾತನಾಡಿ, ಘನತ್ಯಾಜ್ಯ ಸಂಸ್ಕರಣಾ ಘಟಕದ ನೀರು ಹಾಗೂ ಕೊಳಚೆ ನೀರು ಕೆರೆಗೆ ಸೇರುತ್ತಿದ್ದು, ಸ್ಥಳೀಯ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು ಎಂದು ಹೇಳಿದ್ದಾರೆ.
ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಿಬಿಎಂಪಿ, ಬಿಡಿಎ ಮತ್ತು ಬಿಡಬ್ಲ್ಯುಎಸ್ಎಸ್ಬಿ ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿ, 30 ದಿನಗಳಲ್ಲಿ ಕೆರೆ ಸಮಸ್ಯೆ ದೂರಾಗಿಸುವಂತೆ ಸೂಚನೆ ನೀಡಿದ್ದಾರೆ.
ಪ್ರತಿ ದಿನ 0.5 ಮಿಲಿಯನ್ ಲೀಟರ್‌ನ ಮಧ್ಯಂತರ ಒಳಚರಂಡಿ ಪಂಪ್ ಸ್ಟೇಷನ್ (ಐಎಸ್‌ಪಿಬಿ) ಸ್ಥಾಪನೆಗೆ ಪ್ರಸ್ತಾವನೆ ಇತ್ತು, ಆದರೆ, ಮಳೆಯ ಸಮಯದಲ್ಲಿ ಕೊಳಚೆ ನೀರು ಮನೆಗಳಿಗೆ ಸೇರುವುದರಿಂದ ಈ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು. ಇದೀಗ ಸೋಂಪುರ ಕೆರೆಯಲ್ಲಿ 8 ಎಂಎಲ್‌ಡಿ ಸಾಮರ್ಥ್ಯದ ಐಎಸ್‌ಪಿಬಿ ಅಳವಡಿಸಲು ಬಿಡಬ್ಲ್ಯುಎಸ್‌ಎಸ್‌ಬಿಗೆ ಸೂಚಿಸಲಾಗಿದ್ದು, ಭೂಮಿ ಒದಗಿಸುವಂತೆ ಬಿಡಿಎಗೆ ತಿಳಿಸಲಾಗಿದೆ ಎಂದು ಮಹೇಶ್ ತಿಳಿಸಿದರು.
ಕೆರೆಗೆ ಸೇರುವ ಕೊಳಚೆ ನೀರನ್ನು, ಹೆಮ್ಮಿಗೆಪುರದ 12 ಎಂಎಲ್‌ಡಿ ಸಾಮರ್ಥ್ಯದ ಎಸ್‌ಟಿಪಿಗೆ ಕಳುಹಿಸುವಂತೆ ಹಾಗೂ ಕೋನಸಂದ್ರ ಕೆರೆ ಮಾಲಿನ್ಯದ ಬಗ್ಗೆಯೂ ನಾಗರಿಕ ಸಂಸ್ಥೆಗಳಿಗೆ ಲೋಕಾಯುಕ್ತರು ಸೂಚನೆಗಳನ್ನು ನೀಡಿದ್ದಾರೆಂದು ಹೇಳಿದ್ದಾರೆ.
ಕೆರೆಯ ಉಸ್ತುವಾರಿ ವಹಿಸಿರುವ ಬಿಬಿಎಂಪಿಯು 6 ಕೋಟಿ ರೂ.ಗಳಲ್ಲಿ ಯೋಜನೆ ಅಭಿವೃದ್ಧಿಪಡಿಸಲು ಸಜ್ಜಾಗಿದ್ದು, ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ (ಎನ್‌ಡಿಆರ್‌ಎಫ್) ತನ್ನ ನಿಧಿಯಲ್ಲಿ ಕೆರೆ ಅಭಿವೃದ್ಧಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.
ತಾಂತ್ರಿಕ ಸಲಹಾ ಸಂಸ್ಥೆಯಾದ ವಿಮೋಸ್ ಸಿದ್ಧಪಡಿಸಿದ ವಿವರವಾದ ಯೋಜನಾ ವರದಿಗೆ ಕರ್ನಾಟಕ ಕೆರೆ ಸಂರಕ್ಷಣಾ ಅಭಿವೃದ್ಧಿ ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಈ ಯೋಜನೆಯು ಜೌಗು ಪ್ರದೇಶಗಳ ಸುಧಾರಣೆ, ಒಳಹರಿವು, ಬೇಲಿ ಮತ್ತು ಕೆರೆಯ ಸುತ್ತಲಿನ ಜಲಾನಯನ ಪ್ರದೇಶಗಳಿಂದ ಮಳೆನೀರು ಒಳಹರಿವನ್ನು ಸುಗಮವಾಗಿ ಸಾಗುವಂತೆ ಮಾಡುತ್ತದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
Advertisement