
ಬೆಂಗಳೂರು: ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದಾಳೆ ಎಂದು ನಂಬಲಾಗಿದ್ದ 9 ವರ್ಷದ ಬಾಲಕಿ ದಿಢೀರ್ ಪ್ರತ್ಯಕ್ಷವಾಗಿದ್ದು, ಇಡೀ ನಾಪತ್ತೆ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಹೌದು.. ಗೋರಿಪಾಳ್ಯದ ಚಿಂದಿ ಆಯುವವನ ಮಗಳಾದ 9 ವರ್ಷದ ಪೂಜಾ (ಹೆಸರು ಬದಲಿಸಲಾಗಿದೆ) ನಾಪತ್ತೆಯಾಗಿದ್ದಳು. ಆಕೆಯ ಪೋಷಕರು ಈ ಸಂಬಂಧ ತಮ್ಮ ನೆರೆಮನೆಯ ಪುನೀತ್ ಎಂಬಾತನ ಮೇಲೆ ಜಗಜೀವನ್ ರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂಲಗಳ ಪ್ರಕಾರ ಚಿಂದಿ ಆಯುತ್ತಿದ್ದ ವ್ಯಕ್ತಿಯ ಮನೆಯ ಪಕ್ಕದಲ್ಲೇ ಆರೋಪಿ ಪುನೀತ್ ತನ್ನ ಪೋಷಕರೊಂದಿಗೆ ನೆಲೆಸಿದ್ದ. ನಿತ್ಯ ಬಾಲಕಿ ಮನೆಗೆ ಬಂದು ಆಕೆಯನ್ನು ಆಟವಾಡಿಸುತ್ತಿದ್ದ.
ಇದರಿಂದ ಉಭಯ ಮನೆಗಳ ಸದಸ್ಯರ ನಡುವೆ ಸ್ನೇಹ ಬೆಳೆದಿತ್ತು. ಸೆಪ್ಟೆಂಬರ್ 18 ರಂದು ಅಂದರೆ ಬಾಲಕಿ ಕಾಣೆಯಾದ ದಿನ, ರಾಜಾಜಿನಗರದಲ್ಲಿರುವ ತನ್ನ ಸಹೋದರಿಯನ್ನು ಭೇಟಿ ಮಾಡಲು ಬಾಲಕಿಯನ್ನು ಕರೆದುಕೊಂಡು ಹೋಗುವುದಾಗಿ ಪುನೀತ್ ತಿಳಿಸಿದ್ದ. ಇದಕ್ಕೆ ಬಾಲಕಿ ಪೂಜಾಳ ಪೋಷಕರು ಕೂಡ ಆಕೆಯನ್ನು ಕರೆದುಕೊಂಡು ಹೋಗಲು ಅನುಮತಿಸಿದ್ದರು.
ಆದರೆ, ಮರುದಿನ ಪೂಜಾ ಇಲ್ಲದೆ ಪುನೀತ್ ವಾಪಸಾಗಿದ್ದ. ಆಕೆಯ ಪೋಷಕರು ಪೂಜಾ ಎಲ್ಲಿ ಎಂದು ಪ್ರಶ್ನಿಸಿದಾಗ ಆತ ಆಕೆ ಎಲ್ಲಿದ್ದಾಳೆಂದು ತನಗೆ ತಿಳಿದಿಲ್ಲ ಎಂದು ಹೇಳಿದ. ಇದರಿಂದ ಗಾಬರಿಗೊಂಡ ಆಕೆಯ ಪೋಷಕರು ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಪುನೀತ್‌ನನ್ನು ಕರೆಸಿ ವಿಚಾರಿಸಿದಾಗ, ಆತ ಪೂಜಾಳನ್ನು ಮಂಡ್ಯಕ್ಕೆ ಕರೆದೊಯ್ದಿದೆ.
ಆದರೆ ಶೆಟ್ಟಿಹಳ್ಳಿಯಲ್ಲಿ ಇಳಿದು ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದೆ. ನಂತರ ಮಂಡ್ಯದ ಈರುಳ್ಳಿ ಮಾರುಕಟ್ಟೆಯಲ್ಲಿ ಶವವನ್ನು ವಿಲೇವಾರಿ ಮಾಡಿರುವುದಾಗಿ ಹೇಳಿದ. ಆದರೆ ವಿಚಾರಣೆ ವೇಳೆ ಆತ ಪಾನಮತ್ತನಾಗಿದ್ದರಿಂದ ಪೊಲೀಸರು ಆತನ ಹೇಳಿಕೆ ಕುರಿತು ಅನುಮಾನ ವ್ಯಕ್ತಪಡಿಸಿ ತನಿಖೆ ಮುಂದುವರಿಸಿದ್ದರು.
ಪುನೀತ್ ಜೊತೆ ಪೂಜಾ ಕೆಂಗೇರಿ ರೈಲು ನಿಲ್ದಾಣದಿಂದ ಮೈಸೂರಿಗೆ ರೈಲು ಹತ್ತಿದ್ದರು ಎಂಬುದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿದಿದೆ. ನಂತರ ಪೊಲೀಸರು ಮತ್ತೆ ಪುನೀತ್ ನನ್ನು ವಿಚಾರಣೆಗೆ ಕರೆತಂದರು. ಈ ಸಮಯದಲ್ಲಿ, ಆತ ನೆಲದ ಮೇಲೆ ಬಿದ್ದಿದ್ದ ಬಟ್ಟೆಯ ತುಂಡನ್ನು ಎತ್ತಿಕೊಂಡು, ಪೂಜಾಳನ್ನು ಅತ್ಯಾಚಾರ ಮಾಡಿದ ನಂತರ ಇದೇ ಬಟ್ಟೆಯಿಂದ ಒರೆಸಿಕೊಂಡಿದ್ದೆ ಎಂದು ಹೇಳಿದ್ದಾನೆ. ಆತನ ಈ ಹೇಳಿಕೆಯನ್ನೂ ನಂಬದ ಪೊಲೀಸರು ಮತ್ತೆ ತಮ್ಮ ತನಿಖೆ ಮುಂದುವರೆಸಿದ್ದಾರೆ.
ತನಿಖೆ ವೇಳೆ ಆತ ಹೇಳಿದ್ದ ಶೆಟ್ಟಿಹಳ್ಳಿ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದೆವು ಎಂಬ ಮಾತು ಸುಳ್ಳು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಏಕೆಂದರೆ ಆ ಸಮಯದಲ್ಲಿ ಈ ಮಾರ್ಗದಲ್ಲಿ ಎಕ್ಸ್ ಪ್ರೆಸ್ ರೈಲು ಸಂಚರಿಸಿದ್ದು, ಅದು ಶೆಟ್ಟಿಹಳ್ಳಿ ನಿಲ್ದಾಣದಲ್ಲಿ ನಿಂತಿಲ್ಲ. ಮೈಸೂರು ತಲುಪುವ ಮೊದಲು ಮಂಡ್ಯದಲ್ಲಿ ಮಾತ್ರ ನಿಂತಿದೆ ಎಂಬುದನ್ನು ಪತ್ತೆ ಮಾಡಿದ್ದಾರೆ.
ಅದರಂತೆ ಆತ ನೀಡಿದ್ದ ಆ ಹೇಳಿಕೆ ಕೂಡ ಸುಳ್ಳಾಗಿದೆ. ಪೊಲೀಸರು ತಮ್ಮ ತನಿಖೆಯನ್ನು ಮುಂದುವರೆಸಿ ಎಲ್ಲಾ ರೈಲು ನಿಲ್ದಾಣಗಳಲ್ಲಿ ಬಾಲಕಿ ಪೂಜಾಳ ಚಿತ್ರವನ್ನು ಪ್ರಸಾರ ಮಾಡಿದ್ದಾರೆ. ಇನ್ನೇನು ಯಾವುದೇ ಮಾಹಿತಿ ದೊರೆಯುತ್ತಿಲ್ಲ ಎನ್ನವಾಗಲೇ ಪೊಲೀಸರಿಗೆ ಕರೆ ಬಂದಿದ್ದು, ಅದೇ ದಿನ ಪೂಜಾ ನಾಪತ್ತೆಯಾದ ದಿನ ಮೈಸೂರಿನ ರೈಲು ಬೋಗಿಯಲ್ಲಿ ಒಬ್ಬಳೇ ಹುಡುಗಿಯೊಬ್ಬಳು ಪತ್ತೆಯಾಗಿದ್ದಳು.
ಆಕೆಯನ್ನು ಮೈಸೂರು ರೈಲ್ವೆ ಪೊಲೀಸರು ಸ್ಥಳೀಯ ಆಶ್ರಯ ಬಾಲಮಂದಿರಕ್ಕೆ ಕರೆದೊಯ್ದಿದ್ದರು. ಬಾಲಕಿ ನಾಪತ್ತೆ ಪ್ರಸಾರದ ಕುರಿತು ಮಾಹಿತಿ ಪಡೆದು ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತಿಮವಾಗಿ ಪೂಜಾ ಪತ್ತೆಯಾಗಿದ್ದು, ಆಕೆ ನಡೆದ ವಿಚಾರವನ್ನೆಲ್ಲಾ ಹೇಳಿದ್ದಾಳೆ. ಪೊಲೀಸರು ಪೂಜಾಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಆಕೆ ಸುರಕ್ಷಿತವಾಗಿದ್ದು, ಅತ್ಯಾಚಾರ ನಡೆದಿಲ್ಲ ಎಂದು ಖಚಿತಪಡಿಸಿಕೊಂಡಿದ್ದಾರೆ.
ಆದರೆ ಆರೋಪಿ ಪುನೀತ್ ಏಕೆ ಆ ರೀತಿ ಸುಳ್ಳು ಹೇಳಿದ ಎಂಬುದರ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Advertisement