ಬೆಂಗಳೂರು: ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆಯ ಪಿತೃಪಕ್ಷ ಹಬ್ಬ ಬರುತ್ತಿದ್ದು, ಅಂದು ಮಾಂಸ ಮಾರಾಟ ನಿಷೇಧ ಇರುವುದರಿಂದ ಪಿತೃಪಕ್ಷ ಹಬ್ಬ ಆಚರಿಸಲು ಅಡ್ಡಿಯಾಗುತ್ತಿದೆ. ಹೀಗಾಗಿ ವಿಶೇಷ ಸಂದರ್ಭವೆಂದು ಪರಿಗಣಿಸಿ ಮಾಂಸ ಮಾರಾಟ ನಿಷೇಧ ಆದೇಶವನ್ನು ಸಡಿಲಿಸುವಂತೆ ಬಿಬಿಎಂಪಿಗೆ ಕರ್ನಾಟಕ ಕೋಳಿ ವ್ಯಾಪಾರಿಗಳ ಸಂಘ ಮನವಿ ಮಾಡಿಕೊಂಡಿದೆ.
ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು ಮಧ್ಯಪ್ರವೇಶಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎನ್.ನಾಗರಾಜು ತಿಳಿಸಿದ್ದಾರೆ.
ಪ್ರತಿ ವರ್ಷ ಮಹಾಲಯ ಅಮಾವಾಸ್ಯೆಯ ಹಬ್ಬದ ದಿನದಂದು ರಾಜ್ಯದ ಕೋಟ್ಯಾಂತರ ಜನರು, ಮಾಂಸಾಹಾರ ಸಿದ್ಧಪಡಿಸಿ ತಮ್ಮ ಹಿರಿಯರಿಗೆ ಎಡೆ ಹಾಕಿ, ಪೂಜೆ ಮಾಡಿ ಬಂಧು ಬಳಗ, ಸ್ನೇಹಿತರೊಂದಿಗೆ ಊಟ ಮಾಡುವ ಮೂಲಕ ಹಬ್ಬವನ್ನು ಆಚರಿಸುವುದು ಹಲವಾರು ಶತಮಾನಗಳಿಂದ ರೂಢಿಯಲ್ಲಿದೆ. ಈ ವರ್ಷ ಪಿತೃಪಕ್ಷದ ಮಹಾಲಯ ಅಮಾವಾಸ್ಯೆಯ ಹಬ್ಬ ಗಾಂಧಿಜಯಂತಿ ದಿನವೇ ಬಂದಿದ್ದು, ಆ ದಿನ ಮಾಂಸ ಮಾರಾಟಕ್ಕೆ ನಿಷೇಧ ಇರುವುದರಿಂದ ರಾಜ್ಯದ ಕೋಟ್ಯಂತರ ಜನರು ಹಿಂದಿನಿಂದಲೂ ರೂಢಿಯಲ್ಲಿರುವ ಹಬ್ಬದ ಆಚರಣೆಗೆ ಅಡಚಣೆಯಾಗಲಿದೆ ಎಂಬ ಆತಂಕದಲ್ಲಿದ್ದಾರೆ.
ರಾಷ್ಟ್ರಪಿತ ಮಹಾತ್ಮಗಾಂಧಿ ಬಗ್ಗೆ ನಮ್ಮ ರಾಜ್ಯದ ಜನರಿಗೆ ಗೌರವವಿದೆ. ಆದರೆ, ಮಹಾಲಯ ಅಮಾವಾಸ್ಯೆ ದಿನ ಹಬ್ಬ ಆಚರಣೆ ಮಾಡಲೇಬೇಕಿದೆ. ಗಾಂಧಿಜಯಂತಿ ಎಂಬ ಕಾರಣದಿಂದ ಹಬ್ಬ ಆಚರಣೆಗೆ ಅಡಚಣೆಯಾಗಬಾರದು. ರಾಜ್ಯದ ಜನರು ಹಾಗೂ ಭಾವನೆ, ಹಬ್ಬ ಮಾಡುವ ಹಕ್ಕುಗಳಿಗೆ ಯಾವುದೇ ಕಾರಣದಿಂದಲೂ ಧಕ್ಕೆಯಾಗಬಾರದು. ಹೀಗಾಗಿ. ಮಾಂಸ ಮಾರಾಟ ಮತ್ತು ಪ್ರಾಣಿಗಳ ಹತ್ಯೆ ನಿಷೇಧ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಸೆಲ್ವರಾಜ್ ಮಾತನಾಡಿ, ಸರಕಾರ ಮತ್ತು ಪಾಲಿಕೆ ನಮ್ಮ ಮನವಿಗೆ ಮಣಿಯದಿದ್ದರೆ ಭಾನುವಾರ (ಅಕ್ಟೋಬರ್ 1) ಪೂರ್ವಭಾವಿಯಾಗಿ ಧಾರ್ಮಿಕ ವಿಧಿವಿಧಾನಗಳನ್ನು ಹಮ್ಮಿಕೊಳ್ಳುವಂತೆ ಜನರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
Advertisement