ಬೆಂಗಳೂರು: ರಸ್ತೆ ಆಗಲೀಕರಣಕ್ಕೆ 12.34 ಎಕರೆ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದ್ದು, ಬೆಳ್ಳಂದೂರು ಟ್ರಾಫಿಕ್ ಸಮಸ್ಯೆ ಶೀಘ್ರದಲ್ಲೇ ನಿವಾರಣೆಯಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶನಿವಾರ ಹೇಳಿದರು.
ಬೆಂಗಳೂರಿನ ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರ ಜೊತೆ ವಿಧಾನಸೌಧದಲ್ಲಿ ಶನಿವಾರ ಈ ಕುರಿತು ಡಿಸಿಎಂ ಸಮಾಲೋಚನೆ ನಡೆಸಿದರು.
ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಡಿಸಿಎಂ, ಎಂ.ಜಿ. ರಸ್ತೆಯಿಂದ ಬೆಳ್ಳಂದೂರು ಭಾಗಕ್ಕೆ ತೆರಳಲು ಸುಮಾರು 1 ಗಂಟೆ ಸಮಯ ಬೇಕಾಗಿತ್ತು. ಈ ರಸ್ತೆ ನಿರ್ಮಾಣವಾದ ನಂತರ 5-8 ನಿಮಿಷಗಳ ಅಂತರದಲ್ಲಿ ಕ್ರಮಿಸಬಹುದು ಎಂದು ಹೇಳಿದರು.
ನಾನು ಹಾಗೂ ಮುಖ್ಯಮಂತ್ರಿಗಳು ಕೇಂದ್ರ ರಕ್ಷಣಾ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವಾಲಯ ಸ್ಪಂದಿಸಿದ್ದು, ಒಟ್ಟು 22 ಎಕರೆ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಡಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಈ ರಸ್ತೆ ನಿರ್ಮಾಣದ ಮೊದಲ ಹಂತದ 3.50 ಕಿ.ಮೀ ಕಾಮಗಾರಿಗೆ 35 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಟ್ರಿನಿಟಿ ಸರ್ಕಲ್, ಈಜಿಪುರ ಸೇರಿದಂತೆ ಒಂದಷ್ಟು ಕಡೆ ನೂತನ ರಸ್ತೆ ನಿರ್ಮಾಣಕ್ಕೆ ಇನ್ನು 10.77 ಎಕರೆ ಜಾಗವನ್ನು ರಕ್ಷಣಾ ಇಲಾಖೆ ನೀಡಬೇಕಿದೆ. ಇದರಿಂದ ಐಟಿ ಹಬ್‌ಗೆ ತೆರಳಲು ಇದ್ದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ. ಈಗಾಗಲೇ ರಕ್ಷಣಾ ಇಲಾಖೆಯವರು 12.34 ಎಕರೆ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸಿದ್ದಾರೆ. ಇದಕ್ಕಾಗಿ ನಮಗೆ ಸಹಕಾರ ಕೊಟ್ಟ ಲೆಫ್ಟನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರು ಇದೇ 30 ರಂದು ನಿವೃತ್ತಿಯಾಗುತ್ತಿದ್ದು, ಅವರನ್ನು ನಮ್ಮ ಕಚೇರಿಗೆ ಆಹ್ವಾನಿಸಿ ಅಭಿನಂದಿಸಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನ ನಾಗರೀಕರಿಗೆ, ವಿಶೇಷವಾಗಿ ಐಟಿ ಹಬ್‌ಗೆ ತೆರಳುವವರಿಗೆ ಹಾಗೂ ಪೂರ್ವ ಬೆಂಗಳೂರಿಗರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ. ನಾನು ಬೆಂಗಳೂರು ನಗರಭಿವೃದ್ಧಿ ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ನಂತರ ಬೆಳ್ಳಂದೂರು ಹಾಗೂ ಸುತ್ತಮುತ್ತಲ ಐಟಿ ಹಬ್ ಭಾಗದ ಜನರ ಸಮಸ್ಯೆ ಆಲಿಸಿದ್ದೆ. ಅಲ್ಲಿನ ಸಂಚಾರ ದಟ್ಟಣೆ ವಿಚಾರವಾಗಿ ದಿನನಿತ್ಯ 8-10 ಇ-ಮೇಲ್‌ಗಳು ನನಗೇ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾನು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವು. ಈ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದಂತಾಗಿದೆ. ಹೆಬ್ಬಾಳದ ಬಳಿಯ ಹೋಪ್ ಡೈರಿ ಫಾರ್ಮ್ ಬಳಿ ಟನಲ್ ರಸ್ತೆಯ ಪ್ರವೇಶಕ್ಕೆ ಜಾಗ ಅಗತ್ಯವಿದೆ. ಇದಕ್ಕೆ ಎರಡು ಎಕರೆ ಜಾಗ ಬಿಟ್ಟುಕೊಡಬೇಕು ಎಂಬ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ.
ಈ ಜಾಗಗಳನ್ನು ರಕ್ಷಣಾ ಇಲಾಖೆಯಿಂದ ಪಡೆಯಲು ನಾನು ಬಹಳಷ್ಟು ಪ್ರಯತ್ನ ಮಾಡಿದ್ದೇನೆ, ಕಾಗದದ ಕೆಲಸ ಮಾಡಿದ್ದೇವೆ. ನಿರಂತರವಾಗಿ ರಕ್ಷಣಾ ಇಲಾಖೆ ಜತೆ ಸಂಪರ್ಕ ಇಟ್ಟುಕೊಂಡು ಮನವಿ ಮಾಡಿದ್ದೇನೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಕ್ಷಣಾ ಇಲಾಖೆ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು.
ಭೂಮಿ ಹಸ್ತಾಂತರಕ್ಕೆ ರಕ್ಷಣೆ ಇಲಾಖೆ ಏನು ಬೇಡಿಕೆ ಇಟ್ಟಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಕ್ಷಣಾ ಇಲಾಖೆಯು ಭೂಮಿಗೆ ಪರ್ಯಾಯವಾಗಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಕೇಳಿದ್ದು, ನಾವು ಅದನ್ನು ಮಾಡುತ್ತೇವೆ ಎಂದರು.
Advertisement