'ರಾಮಮಂದಿರ ನಿರ್ಮಾಣಕ್ಕೆ ನಮ್ಮ ಬೆಂಬಲ': ಡ್ಯಾಮೇಜ್ ಕಂಟ್ರೋಲ್ ಗೆ ಸಿಎಂ ಸಿದ್ದರಾಮಯ್ಯ ಮುಂದು!

'ವೋಟಿಗಾಗಿ ರಾಮಮಂದಿರ' ಎಂಬ ಸಚಿವ ಡಿ ಸುಧಾಕರ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಇತ್ತ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ, 'ರಾಮಮಂದಿರ ನಿರ್ಮಾಣಕ್ಕೆ ನಮ್ಮ ಬೆಂಬಲ' ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: 'ವೋಟಿಗಾಗಿ ರಾಮಮಂದಿರ' ಎಂಬ ಸಚಿವ ಡಿ ಸುಧಾಕರ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಇತ್ತ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ, 'ರಾಮಮಂದಿರ ನಿರ್ಮಾಣಕ್ಕೆ ನಮ್ಮ ಬೆಂಬಲ' ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮಮಂದಿರ (Ayodhya Ram Mandir) ಉದ್ಘಾಟನೆ ವಿಚಾರವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹಲವು ವಿರೋಧ ಪಕ್ಷದ ನಾಯಕರು ಆರೋಪಿಸಿರುವ ಬೆನ್ನಲ್ಲೇ, ‘ನಮ್ಮ ಸರ್ಕಾರ ಮತ್ತು ಪಕ್ಷ ರಾಮ ಮಂದಿರದ ಪರವಾಗಿದೆ. ರಾಮ ಮಂದಿರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ. 

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಅಯೋಧ್ಯೆ ರಾಮಮಂದಿರ ವಿಚಾರಕ್ಕೆ ನಮ್ಮ ವಿರೋಧವಿಲ್ಲ. ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ನಾವು ರಾಮಮಂದಿರದ ಪರವಾಗಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಪರವಾಗಿ ತಮ್ಮ ಸರ್ಕಾರವಿದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.

ಉದ್ಘಾಟನೆಗೆ ಆಹ್ವಾನ ಬಂದಿಲ್ಲ: ಸಿದ್ದರಾಮಯ್ಯ
ಈ ಮಧ್ಯೆ, ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ, ಆಹ್ವಾನ ಬಂದರೆ ಆಮೇಲೆ ನೋಡೋಣ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ರಾಮಮಂದಿರ ಕುರಿತು ಸಹೋದ್ಯೋಗಿಗಳ ಹೇಳಿಕೆ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ ಗಳಿಸಲು ಕೇಂದ್ರದ ಬಿಜೆಪಿ ಸರ್ಕಾರ ರಾಮಮಂದಿರ ಉದ್ಘಾಟನೆಯನ್ನು ಬಳಸಿಕೊಂಡಿದೆ. ರಾಮ ಮಂದಿರ ಉದ್ಘಾಟನೆ ಒಂದು ಸ್ಟಂಟ್ ಅಷ್ಟೇ ಎಂದು ಸಿದ್ದರಾಮಯ್ಯ ಸಂಪುಟದ ಸಚಿವರೊಬ್ಬರು ಆರೋಪಿಸಿದ ಬೆನ್ನಲ್ಲೇ ಅವರು ರಾಮ ಮಂದಿರದ ಪರ ಹೇಳಿಕೆ ನೀಡಿದ್ದಾರೆ.

ರಾಜಕೀಯ ಸ್ಟಂಟ್ ಎಂದಿದ್ದ ಸುಧಾಕರ್
ಇನ್ನು ಪುಲ್ವಾಮಾ ಭಯೋತ್ಪಾದಕ ದಾಳಿ ಸಂದರ್ಭವನ್ನು ನೆನಪಿಸಿಕೊಂಡಿದ್ದ ಕರ್ನಾಟಕ ಸಚಿವ ಸುಧಾಕರ್, 'ಕಳೆದ ಲೋಕಸಭೆ ಚುನಾವಣೆಯಲ್ಲಿ ಮತ ಗಳಿಸಲು ಬಿಜೆಪಿ ಸರ್ಕಾರ ಪುಲ್ವಾಮಾ ಭಯೋತ್ಪಾದನಾ ದಾಳಿಯನ್ನು ಬಳಸಿಕೊಂಡಿತ್ತು. ಇದೀಗ ಭಗವಾನ್ ರಾಮನ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 'ರಾಮಮಂದಿರ ಉದ್ಘಾಟನೆ ಒಂದು ಸ್ಟಂಟ್ ಆಗಿದ್ದು, ಜನರು ಮೂರ್ಖರಲ್ಲ, ನಮ್ಮನ್ನು ಎರಡು ಬಾರಿ ಮೂರ್ಖರನ್ನಾಗಿ ಮಾಡಲಾಗಿದೆ, ಮೂರನೇ ಬಾರಿಗೆ ನಾವು ಮೋಸ ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ಲೋಕಸಭಾ ಚುನಾವಣೆಗೂ ಮುನ್ನ ರಾಮಮಂದಿರ ಉದ್ಘಾಟನೆಯಾಗುತ್ತಿದೆ, ರಾಮಮಂದಿರಕ್ಕೆ ನಾನು ಹಾಗೂ ಕಾಂಗ್ರೆಸ್ ಶಾಸಕ ರಘುಮೂರ್ತಿ ಕೊಡುಗೆ ನೀಡಿದ್ದೇವೆ, ನಾವೂ ಇಟ್ಟಿಗೆ ನೀಡಿದ್ದೇವೆ.ರಾಮ ದೇವರೇ ಎಲ್ಲರಿಗೂ, ಮಂದಿರ ಉದ್ಘಾಟನೆ ಚುನಾವಣೆಯ ಸಮಯದಲ್ಲಿ ಗಿಮಿಕ್ ಆಗಿದೆ ಎಂದು ಸುಧಾಕರ್ ಹೇಳಿದರು.

ಮತ್ತೊಬ್ಬ ಸಚಿವ ಪ್ರಿಯಾಂಕ್ ಖರ್ಗೆ ಸಹ ರಾಮ ಮಂದಿರ ವಿಚಾರವಾಗಿ ಟೀಕೆ ಮಾಡಿದ್ದರು. ‘ಕಳೆದ ಲೋಕಸಭೆ ಚುನಾವಣೆ ವೇಳೆ ರಾಮಮಂದಿರ ಎಲ್ಲಿತ್ತು? ಮತ ಸೆಳೆಯಲು ಬಿಜೆಪಿ ಧಾರ್ಮಿಕ ನಂಬಿಕೆಗಳನ್ನು ಬಳಸುತ್ತಿದೆ ಎಂದು ಕಿಡಿಕಾರಿದರು. ಈ ವಿಚಾರ ರಾಜಕೀಯವಾಗಿ ನಕಾರಾತ್ಮಕ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ ಎಂಬ ಸುಳಿಸುವ ಸಿಕ್ಕ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಡ್ಯಾಮೇಜ್ ಕಂಟ್ರೋಲ್​​ಗೆ ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com