ಬೆಂಗಳೂರು: ಉದ್ಯಮಿಯೊಬ್ಬರನ್ನು ಅಪಹರಿಸಿ, ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎಸ್'ಸಿ ಆಕಾಂಕ್ಷಿ ಸೇರಿ ಇಬ್ಬರು ಆರೋಪಿಗಳನ್ನು ರಾಜಾಜಿನಗರ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಚಿನ್, ಗೌರಿಶಂಕರ್ ಎಂದು ಗುರ್ತಿಸಲಾಗಿದೆ. ಇಬ್ಬರ ಪೈಕಿ ಓರ್ವ ಆರೋಪಿ ಸಚಿನ್ ಯುಪಿಎಸ್'ಸಿ ಆಕಾಂಕ್ಷಿ ಯಾಗಿದ್ದ ಎಂದು ತಿಳಿದುಬಂದಿದೆ.
ಅಪಹರಣಕ್ಕೊಳಗಾಗಿದ್ದ ವ್ಯಕ್ತಿಯನ್ನು ಚೇತನ್ ಶಾ ಎಂದು ಗುರುತಿಸಲಾಗಿದ್ದು, ಚೇತನ್ ಅವರು ತಮ್ಮ ಮಗಳನ್ನು ಸಿಬಿಡಿ ಪ್ರದೇಶದ ಹೆಸರಾಂತ ಕಾಲೇಜಿಗೆ ಬ್ಯಾಚುಲರ್ಸ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಕೋರ್ಸ್‌ಗೆ ಸೇರಿಸಲು ಬಯಸಿದ್ದರು. ಈ ಪ್ರಯತ್ನದಲ್ಲಿ ಆರೋಪಿಗಳ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಸೀಟ್ ಕೊಡಿಸುವ ಭರವಸೆಯನ್ನು ಆರೋಪಿಗಳು ಚೇತನ್ ಅವರಿಗೆ ನೀಡಿದ್ದಾರೆ.
ಚೇತನ್ ಅವರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಯನ್ನು ಹೊಂದಿದ್ದು, ಇತರರ ನೆರವಿನೊಂದಿಗೆ ಮಗಳಿಗಾಗಿ ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆರೋಪಿಗಳು ಸೀಟು ಸಿಕ್ಕಿರುವುದು ತಮ್ಮಿಂದ ಎಂದು ಹೇಳಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಚೇತನ್ ಅವರು ಹಣ ನೀಡರು ನಿರಾಕರಿಸಿದ್ದಾನೆ. ಇದರಿಂದ ಕೆಂಡಾಮಂಡಲಗೊಂಡಿರುವ ಆರೋಪಿಗಳು ಚೇತನ್ ಅವರನ್ನು ಆಟೋರಿಕ್ಷಾದಲ್ಲಿ ಅಪಹರಿಸಿ, 7 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ.
ಜನವರಿ 5 ರಂದು ಡಾ ರಾಜ್‌ಕುಮಾರ್ ರಸ್ತೆಯಿಂದ ಚೇತನ್ ಅವರನ್ನು ಅಪಹರಿಸಿದ್ದಾರೆ. ಹಣ ನೀಡುವಂತೆ ಚೇತನ್ ಅವರ ಪತ್ನಿಯನ್ನು ಸಂಪರ್ಕಿಸಿದ್ದಾರೆ. ಹಣ ಪಡೆದ ಬಳಿಕ ಚೇತನ್ ಅವರನ್ನು ಬಿಡುಗಡೆ ಮಾಡಿದ್ದಾರೆ.
ಬಿಡುಗಡೆಗೊಂಡ ಬಳಿಕ ಚೇತನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ರಾಜಾಜಿನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅಪಹರಣಕ್ಕಾಗಿ ಬಳಸಿದ್ದ ಆಟೋ ಹಾಗೂ ಎರಡು ಫೋನ್ ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
Advertisement