ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ: ಪತಿ ಕೊಂದಿದ್ದ ಪತ್ನಿ, ಪ್ರಿಯಕರನ ಬಂಧನ

ಪ್ರಿಯಕರನ ಜತೆ ಸೇರಿ ಪತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ ಬಳಿಕ ಜಾರಿ ಬಿದ್ದು ಮೃತಟ್ಟಿದ್ದಾನೆಂದು ನಾಟಕವಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಪ್ರಿಯಕರನ ಜತೆ ಸೇರಿ ಪತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ ಬಳಿಕ ಜಾರಿ ಬಿದ್ದು ಮೃತಟ್ಟಿದ್ದಾನೆಂದು ನಾಟಕವಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ನಂದಿನಿ ಬಾಯಿ(೨೨) ಮತ್ತು ಆಕೆಯ ಪ್ರಿಯಕರ ನಿತೀಶ್ ಕುಮಾರ್(೨೨) ಬಂಧಿತರು. ಆರೋಪಿಗಳು ಜ.9ರಂದು ರಾತ್ರಿ ವೆಂಕಟರಮಣ ನಾಯಕ್(3೦) ಎಂಬಾತನ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು.

ಮೃತನ ತಂದೆ ಲಕ್ಷ್ಮೀ ನಾಯಕ್ ಈ ಸಂಬಂಧ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ವೆಂಕಟರಮಣ ನಾಯಕ್ ಅವರ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಕ್ಕೊಳಪಡಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಮೂಲದ ವೆಂಕಟರಮಣ ನಾಯಕ್ ನಾಲ್ಕು ವರ್ಷದ ಹಿಂದೆ ಸಂಬಂಧಿ ನಂದಿನಿ ಬಾಯಿಯನ್ನು ಮದುವೆಯಾಗಿದ್ದರು. ದಂಪತಿಗೆ ಮೂರು ಮತ್ತು 9 ತಿಂಗಳ ಎರಡು ಹೆಣ್ಣು ಮಕ್ಕಳಿವೆ.

ಕಳೆದ ಮೂರು ವರ್ಷಗಳಿಂದ ದಂಪತಿ ಮಕ್ಕಳೊಂದಿಗೆ ಎಚ್‌ಎಸ್‌ಆರ್ ಲೇಔಟ್‌ನ 2ನೇ ಸೆಕ್ಟರ್‌ನ ಬನಶಂಕರಿ ಎಂಬ ವಸತಿ ಕಟ್ಟಡದಲ್ಲಿ ನೆಲೆಸಿದ್ದರು.

ವೆಂಕಟರಮಣ ಬೆಳಗ್ಗೆ ಇಂದಿರಾನಗರದ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆ ತಾನು ವಾಸವಿರುವ ಬನಶಂಕರಿ ಕಟ್ಟಡದಲ್ಲೇ ವಾಚ್‌ಮನ್ ಕೆಲಸ ಮಾಡಿಕೊಂಡಿದ್ದರು. ಮದುವೆಯ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಬಳಿಕ ಪತ್ನಿ ನಂದಿನಿ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗುತ್ತಿದ್ದಳು. ಬಳಿಕ ಊರಿನ ಹಿರಿಯರ ಸಮ್ಮುಖದಲ್ಲಿ ಆಕೆಗೆ ಬುದ್ಧಿವಾದ ಹೇಳಿ ಗಂಡನ ಜತೆಗೆ ಕಳುಹಿಸಿದ್ದರು.

ಇತ್ತೀಚೆಗೆ ನಂದಿನಿ ಮೊಬೈಲ್‌ನಲ್ಲಿ ವ್ಯಕ್ತಿಯೊಬ್ಬನ ಜತೆಗೆ ತುಂಬಾ ಮಾತನಾಡುತ್ತಿದ್ದಳು. ಈ ವಿಚಾರ ಪತಿ ವೆಂಕರಮಣನಿಗೆ ಗೊತ್ತಾಗಿ ಜಗಳ ಮಾಡಿದ್ದ. ಬಳಿಕ ಇಬ್ಬರ ಕುಟುಂಬದ ಹಿರಿಯರು ರಾಜೀಸಂಧಾನ ಮಾಡಿ ಇನ್ನು ಮುಂದೆ ಹೀಗೆ ಮಾಡದಂತೆ ಆಕೆಗೆ ಬುದ್ಧಿವಾದ ಹೇಳಿದ್ದರು.

ನಂದಿನಿ ಜ.9ರಂದು ರಾತ್ರಿ 8ರ ಸುಮಾರಿಗೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಸಲುಗಿ ಇಂದ ಇದ್ದಳು. ಈ ವೇಳೆ ಏಕಾಏಕಿ ಮನೆಗೆ ಬಂದ ಪತಿ ವೆಂಕಟರಮಣನ ಕೈಗೆ ನಂದಿನಿ ಮತ್ತು ನಿತೀಶ್ ಕುಮಾರ್ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಜೋರು ಜಗಳವಾಗಿದೆ.

ಮದ್ಯ ಸೇವಿಸಿ ಬಂದಿದ್ದ ವೆಂಕಟರಮಣನ ಮೇಲೆ ನಿತೀಶ್ ಕುಮಾರ್ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದಾಗ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ವಾಚ್‌ಮನ್ ಕೊಠಡಿ ಬಳಿಯ ಶೌಚಾಲಯದ ಸಮೀಪಕ್ಕೆ ಎಳೆದೊಯ್ದು ಇರಿಸಿದ್ದಾರೆ. ನಂತರ ಆರೋಪಿ ನಿತೀಶ್ ಕುಮಾರ್ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದಾನೆ.

ಬಳಿಕ ಮದ್ಯದ ಅಮಲಿನಲ್ಲಿ ಶೌಚಾಲಯಕ್ಕೆ ತೆರಳುವಾಗ ಪತಿ ವೆಂಕಟರಮಣ ಬಿದ್ದು ಮೃತಪಟ್ಟಿದ್ದಾನೆ ಎಂದು ನಂದಿನಿ ನಾಟಕವಾಡಿದ್ದಾಳೆ. ಬಳಿಕ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾಳೆ.

ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದಾಗ, ಪತಿ ಮದ್ಯದ ಅಲಿನಲ್ಲಿ ಶೌಚಾಲಯಕ್ಕೆ ತೆರಳುವಾಗ ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ನಂದಿನಿ ಹೇಳಿದ್ದಾಳೆ. ಈ ವೇಳೆ ವೆಂಕಟರಮಣನ ಮೈ ಹಾಗೂ ತಲೆಯ ಗಾಯ ಪರಿಶೀಲಿಸಿದಾಗ ಸಾವಿನ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ.

ಕೊಲೆಯಾದ ವೆಂಕಟರಮಣನ ತಂದೆ ಲಕ್ಷ್ಮೀ ನಾಯಕ್ ಸಹ ಮಗನದು ಸಹಜ ಸಾವಲ್ಲ. ಇದು ಕೊಲೆ ಎಂದು ಸೊಸೆ ನಂದಿನಿ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ಈ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ನಂದಿನಿ ಮೇಲೆ ನಿಗಾ ವಹಿಸಿದ್ದರು. ಈ ನಡುವೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇದು ಸಹಜ ಸಾವಲ್ಲ ವರದಿ ಬಂದಿದೆ.

ಬಳಿಕ ನಂದಿನಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಿದಾಗ ವೆಂಕಟರಮಣನ ಸಾವಿನ ರಹಸ್ಯ ಬಯಲಾಗಿದೆ. ಬಳಿಕ ನಂದಿನಿ ಬಂಧಿಸಿ ಬಳಿಕ ಆಕೆಯ ಪ್ರಿಯಕರ ನಿತೀಶ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com