
ಬೆಂಗಳೂರು: ಹೊಸ ಪಾರ್ಕಿಂಗ್ ಶುಲ್ಕ ಹಾಗೂ ಕಸ ಸಂಗ್ರಹಕ್ಕು ತೆರಿಗೆ ವಿಧಿಸಲು ನಿರ್ಧರಿಸಿರುವ ಸರ್ಕಾರದ ನಿರ್ಧಾರವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್ ಅವರು ಬುಧವಾರ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಪೌಂಡ್ ಒಳಗೆ ವಾಹನಗಳ ಪಾರ್ಕಿಂಗ್ ಗೆ ತೆರಿಗೆ ವಿಚಾರ, ವಾಹನಗಳ ತೆರಿಗೆ ಬಗ್ಗೆ ಸ್ಪಷ್ಟನೆ ನೀಡಿದರು.
ಈ ಹಿಂದೆ ಪಾರ್ಕಿಂಗ್ ಶುಲ್ಕ ಎಂದು ಶೇ.50 ರಷ್ಟು ಹಣ ಕಟ್ಟಲಾಗುತ್ತಿತ್ತು. ಈಗ ಅದು ಜಾಸ್ತಿಯಿದೆ ಎಂದು ಆಕ್ಷೇಪಗಳು ಕೇಳಿಬಂದಿವೆ. ಹಿಂದೆ ಜೋನ್ ಗಳ ಆಧಾರದ ಮೇಲೆ ಶುಲ್ಕ ನಿಗದಿಯಾಗಿತ್ತು. ಆಗ ನಮಗೆ 211 ಕೋಟಿ ರೂ.ಗಳ ಅದಾಯ ಬರುತ್ತಿತ್ತು. ಆದರೆ, ಹೊಸ ಪದ್ದತಿಯಿಂದ 43 ಕೋಟಿ ಅಷ್ಟು ಆದಾಯ ಕಡಿಮೆಯಾಗುತ್ತಿದೆ. ನಮಗೆ ಕೋಟಿ ಕೋಟಿ ಹೊರೆಯಾದರೂ ಕೂಡ ಜನರಿಗೆ ಸಹಾಯವಾಗಲಿ ಎಂದು ಹೊಸ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಒಂದೇ ರೀತಿಯ ಶುಲ್ಕವನ್ನು ಜಾರಿಗೆ ತಂದಿರುವುದರಿಂದ ವಸತಿ ಪ್ರದೇಶದವರಿಗೆ ಹೆಚ್ಚಾಗುತ್ತದೆ ಎಂಬುದಾದರೆ ಅವರು ಆಕ್ಷೇಪಣೆ ಸಲ್ಲಿಸಲಿ. ಯಾರಿಗೂ ಹೆಚ್ಚಾಗುವುದಿಲ್ಲ ಎಂಬುದು ನಮ್ಮ ಭಾವನೆ. ಎಲ್ಲವೂ ಸರಿ ಇದೆ ಎಂದೇನೂ ಹೇಳುವುದಿಲ್ಲ. ನಮ್ಮ ಮೇಲೆ ಸರ್ಕಾರ ಇದೆ, ಮುಖ್ಯಮಂತ್ರಿ ಇದ್ದಾರೆ, ಉಪ ಮುಖ್ಯಮಂತ್ರಿ ಇದ್ದಾರೆ, ನಗರಾಭಿವೃದ್ಧಿ ಇಲಾಖೆ ಇದೆ. ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕಸ ಸಂಗ್ರಹ ತೆರಿಗೆ ವಿಚಾರವಾಗಿ ಮಾತನಾಡಿ, 1986ರ ಪರಿಸರ ಸಂರಕ್ಷಣೆ ಕಾಯ್ದೆಯಲ್ಲಿ ಬೈಲಾ ಇದೆ. ಬಿಬಿಎಂಪಿಯಲ್ಲಿ 2020ರಲ್ಲಿ ಬೈಲಾ ಮಾಡಿ, ತ್ಯಾಜ್ಯ ಉತ್ಪತಿಯ ಮೇಲೆ ರೇಟ್ ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.
2020ರಲ್ಲಿ ಜನಪ್ರತಿನಿಧಿಗಳು ಇದ್ದಾಗಲೇ ಇದು ರೆಡಿಯಾಗಿತ್ತು. ಜನಸಾಮಾನ್ಯರ ಮೇಲೆ ಯಾವ ರೀತಿ ತೆರಿಗೆ ಹಾಕಬೇಕೆಂದು ಪ್ಲ್ಯಾನ್ ಆಗಿತ್ತು. ಈಗಾಗಲೇ ಬೇರೆ ಬೇರೆ ರಾಜ್ಯ, ಲೋಕಲ್ ಆಡಳಿತದಲ್ಲೂ ಈ ಪದ್ಧತಿ ಜಾರಿಯಿದೆ ಎಂದು ಸಮರ್ಥಿಸಿಕೊಂಡರು.
ಪುಣೆ, ಮುಂಬೈ ಸೇರಿ ಹಲವೆಡೆ ಈಗಾಗಲೇ ಕಸಕ್ಕೆ ತೆರಿಗೆ ವಿಧಿಸುವ ಪದ್ಧತಿ ಚಾಲ್ತಿಯಲ್ಲಿದೆ. 2020ರಲ್ಲಿ ಕೋವಿಡ್ ಬಂದ ಹಿನ್ನೆಲೆ ನಾವು ಜಾರಿ ಮಾಡುವುದಕ್ಕೆ ಆಗಿರಲಿಲ್ಲ. ಈಗ ಸರ್ಕಾರದ ಅನುಮತಿ ಪಡೆದು ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಆದರೆ, ಬೈಲಾಗಿಂತ ಶೇ.50 ರಷ್ಟು ಕಡಿಮೆ ತೆರಿಗೆ ವಸೂಲಿಗೆ ಜಾರಿ ಮಾಡುತ್ತಿದ್ದೇವೆ. ಕಮರ್ಷಿಯಲ್, ಬಲ್ಕ್ ತ್ಯಾಜ್ಯ ಉತ್ಪಾದಕರಿಂದ ಚಾರ್ಜ್ ಮಾಡಿದ್ದೇವೆ. ನಿಯಮ ಮಾಡೋದು 2020ರಲ್ಲೇ ಆಗಿತ್ತು, ಜಾರಿಯಾಗಿರಲಿಲ್ಲ. ಈಗ ಬೈಲಾ ಇದ್ದಿದ್ದರಿಂದ ಜಾರಿ ಮಾಡಿದ್ದೇವೆ.
ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅಡಿಯಲ್ಲಿ, 600 ಚದರ ಅಡಿವರೆಗಿನ ಆಸ್ತಿಗಳಿಗೆ ಮಾಸಿಕ 10 ರೂ. ಪಾವತಿಸಬೇಕಾಗುತ್ತದೆ. ಅದೇ ರೀತಿ, 1,000 ಚದರ ಅಡಿ ಅಳತೆಯ ಮನೆಗಳು 50 ರೂ., 2,000 ರಿಂದ 3,000 ಚದರ ಅಡಿ ಅಳತೆಯ ಆಸ್ತಿಗಳು 150 ರೂ., 3,000 ರಿಂದ 4,000 ಚದರ ಅಡಿ ಅಳತೆಯ ಮನೆಗಳು 200 ರೂ. ಮತ್ತು 4,000 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಆಸ್ತಿಗಳು 400 ರೂ. ಪಾವತಿಸಲಿವೆ. ಇದರಿಂದ ಸಂಗ್ರಹವಾಗುವ ಹಣದಿಂದ ಕಸ ವಿಲೇವಾರಿ ನಿರ್ವಹಣೆ ಖರ್ಚು ನಿಭಾಯಿಸುತ್ತೇವೆಂದು ತಿಳಿಸಿದರು.
Advertisement