
ಬೆಂಗಳೂರು: ವಿಚಾರಣಾಧೀನ ಕೈದಿಗೆ ಆಹಾರ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಕಾರಾಗೃಹ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದು, ಹಲ್ಲೆ ನಡೆಸುತ್ತಿದ್ದಾರೆಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಿರುದ್ಧ ಮಹಿಳೆಯೊಬ್ಬರು ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ನಿವಾಸಿ ಬಾನು ಎಂಬುವವರು ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಸೋಮವಾರ ದೂರು ನೀಡಿದ್ದು, ತಮ್ಮ ಒಬ್ಬನೇ ಮಗನ ರಕ್ಷಿಸುವಂತೆ ಮನವಿ ಮಾಡಿದ್ದಾರೆ.
ನನ್ನ 21 ವರ್ಷದ ಮಗ ಹಮೀದ್ ಅಕ್ಟೋಬರ್ 4, 2023 ರಿಂದ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಏಪ್ರಿಲ್ 5 ರಂದು 7-8 ಮಂದಿ ಜೈಲು ಸಿಬ್ಬಂದಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆತ ಹೇಳಿದ್ದ. ಜೈಲು ಸಿಬ್ಬಂದಿ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಮಗನ ದೇಹದ ಮೇಲೆ ಗಂಭೀರ ಗಾಯಗಳಾಗಿದ್ದು, ಇದರ ವೀಡಿಯೊವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ವಿಡಿಯೋದಲ್ಲಿ ಹಮೀದ್ ಅವರ ತೊಡೆ, ಎದೆ ಮತ್ತು ಕೈಗಳ ಮೇಲೆ ಗಾಯದ ಗುರುತುಗಳಿವೆ ಕಂಡು ಬಂದಿದೆ ಎನ್ನಲಾಗಿದೆ.
ಜೈಲಿನಲ್ಲಿ ನನ್ನ ಮಗನಿಗೆ ಆಹಾರ ಮತ್ತು ಮೂಲಭೂತ ಸೌಕರ್ಯಗಳನ್ನು ನಿರಾಕರಿಸಲಾಗಿದೆ. ಸೌಲಭ್ಯಗಳನ್ನು ನೀಡಲು ಜೈಲು ಅಧಿಕಾರಿಗಳು 30,000 ರೂ. ಲಂಚ ಕೇಳಿದ್ದು, ಹಣ ನೀಡದ್ದಕ್ಕೆ ಶೌಚಾಲಯದಲ್ಲಿ ಮಲಗಿಸಿ, ನಿಂದಿಸಿ ದೈಹಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದ್ದಾರೆ.
ದೂರಿನ ಜೊತೆಗೆ, ಹಮೀದ್ ದೇಹದ ಮೇಲಿರುವ ಗಾಯದ ಗುರುತುಗಳ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಲಗತ್ತಿಸಿದ್ದಾರೆ.
ಜೊತೆಗೆ ಮಗನಿಗೆ ವೈದ್ಯಕೀಯ ನೆರವು ನೀಡಲು ಅಧಿಕಾರಿಗಳು ನಿರಾಕರಿಸಿದ್ದು, ಹಣ ಹೊಂದಿಸುವಂತೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.
Advertisement