
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್ ಜಾಮರ್‌ಗಳಿಂದ ಅಕ್ಕ-ಪಕ್ಕದ ಜನವಸತಿ ಪ್ರದೇಶಗಳಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆಗಳಾಗಿದ್ದು, ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಕಾರಾಗೃಹದ ಬಳಿಯಿರುವ ಜನವಸತಿ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಫೆ.24ರಂದು 'Phone jammers in jail trap residents near Bengaluru Central Prison in digital blackout' ವರದಿ ಪ್ರಕಟಿಸಿತ್ತು.
ವರದಿ ಬೆನ್ನಲ್ಲೇ ಮುಖ್ಯಮಂತ್ರಿಗಳ ಕಚೇರಿ ಕಾರಾಗೃಹ ಇಲಾಖೆಯ ಹೆಚ್ಚುವರಿ ಕಾರಾಗೃಹಗಳ ಮಹಾನಿರೀಕ್ಷಕರು ಮತ್ತು ಕಾರಾಗೃಹಗಳ ದಕ್ಷಿಣ ವಲಯ ಉಪಮಹಾನಿರೀಕ್ಷಕರು ನೇತೃತ್ವದಲ್ಲಿ ಜಂಟಿ ವರದಿಗೆ ಸೂಚಿಸಿತ್ತು.
ಬಳಿಕ ಅಧಿಕಾರಿಗಳ ತಂಡ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ, ವರದಿ ಸಿದ್ಧಪಡಿಸಿದೆ. ವರದಿಯಲ್ಲಿ ಜೈಲಿನ ಒಳವೃತ್ತದಲ್ಲಿ ಯಾವುದೇ ನೆಟ್‌ವರ್ಕ್ ದೊರೆಯುತ್ತಿಲ್ಲ. ಹಾಗೆಯೇ ಹೊರವೃತ್ತದ ಸುತ್ತ-ಮುತ್ತ ನೆಟ್‌ವರ್ಕ್ ದೊರೆಯುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿಗೆ ಮಾಹಿತಿ ನೀಡಿದೆ.
ಕಾರಾಗೃಹಗಳಲ್ಲಿನ ಜಾಮರ್‌ಗಳ ದುರಸ್ಥಿ ಮತ್ತು ಮೇಲ್ದರ್ಜೆ ಕಾರ್ಯ ಪ್ರಗತಿಯಲ್ಲಿದೆ. ಮತ್ತೂಂದೆಡೆ ಜಾಮರ್‌ಗಳ ದುರಸ್ತಿ ಹಾಗೂ ಮೇಲ್ದರ್ಜೆಗೇರಿಸುವ ಕಾರ್ಯ ಟೆಸ್ಟಿಂಗ್ ಮತ್ತು ರಿಕ್ಯಾಲಿಬ್ರೇಷನ್ ಹಂತ ದಲ್ಲಿದ್ದು, ಜಾಮರ್ ಅಳವಡಿಕೆಯಿಂದ ಉಂಟಾಗುವ ಸಾಧಕ-ಬಾಧಕಗಳ ಪರಿಶೀಲಿಸಲಾಗುತ್ತಿದೆ. ಪರಿಶೀಲನಾ ಹಂತದಲ್ಲಿ ನೆಟ್‌ವರ್ಕ್ ಕುರಿತಂತೆ ಉಂಟಾಗುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಲು ಕ್ರಮವಹಿಸಲು ಸಂಬಂಧಿಸಿದ ಸಂಸ್ಥೆಗೆ ಸೂಚಿಸಲಾಗಿದೆ. ಜೊತೆಗೆ ನೆಟ್ ವರ್ಕ್ ಸಮಸ್ಯೆ ಬಗ್ಗೆ ಚರ್ಚಿಸಲು ಟೆಲಿಕಮ್ಯೂನಿಕೇಷನ್ ಕನ್ಸಲ್ಟೆನ್ಸ್ ಇಂಡಿಯಾ ಲಿಮಿಟೆಡ್, 4 ಸರ್ವೀಸ್ ಪ್ರೊವೈಡರ್ಸ್ ಗಳ ಅಧಿಕಾರಿಗಳು ಮತ್ತು ಟೆಲಿಕಮ್ಯೂನಿಕೇಷನ್ ಇಲಾಖೆ ಅಧಿಕಾರಿಗಳ ಜೊತೆ ಮಾ.4ರಂದು ಸಭೆ ನಡೆಸಲಾಗುತ್ತದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
Advertisement