
ಬೆಂಗಳೂರು: ಖಾಸಗಿ ಜಮೀನಿನಲ್ಲಿ ಮದ್ಯಪಾನ ಮಾಡಲು ಅವಕಾಶ ನೀಡದ 50 ವರ್ಷದ ವಾಚ್‌ಮನ್‌ನನ್ನು ಮೂವರು ಆರೋಪಿಗಳು ಕೊಲೆ ಮಾಡಿರುವ ಘಟನೆ ಕೆಂಗೇರಿ ಬಳಿಯ ವಡೇರಹಳ್ಳಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ದೂರು ದಾಖಲಿಸಿಕೊಂಡ ಕಗ್ಗಲೀಪುರ ಪೊಲೀಸರು ಕೆಲವೇ ಗಂಟೆಗಳಲ್ಲಿ ವಡೇರಹಳ್ಳಿ ನಿವಾಸಿಗಳಾದ ಪುನೀತ್, ಮಹೇಶ್ ಮತ್ತು ಮೋಹನ್ ಎಂಬ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಮಹೇಶ್ ಹಾಗೂ ಮೋಹನ್ ವೃತ್ತಿಯಲ್ಲಿ ಚಾಲಕರಾಗಿದ್ದು, ಪುನೀತ್ ನಿರುದ್ಯೋಗಿಯಾಗಿದ್ದಾನೆಂದು ತಿಳಿದುಬಂದಿದೆ.
ಮೂವರು ಆರೋಪಿಗಳು ಮದ್ಯದ ಬಾಟಲಿಗಳೊಂದಿಗೆ ಜಮೀನಿನ ಬಳಿ ಬಂದಿದ್ದು, ಜಮೀನು ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಕಾವಲು ಕಾಯುತ್ತಿದ್ದ ನಾಗರಾಜು(50) ಅವರು ನಿರಾಕರಿಸಿದ್ದು, ಬಳಿಕ ಆರೋಪಿಗಳು ಮರದ ಹಲಗೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ನಾಗರಾಜು ಅವರ ಮೊಬೈಲ್ ಕಸಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಬಳಿಕ ಸ್ಥಳೀಯರು ನಾಗರಾಜು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು, ಈ ವೇಳೆ ಮಾರ್ಗದ ಮಧ್ಯೆಯೇ ನಾಗರಾಜು ಅವರು ಕೊನೆಯುಸಿರೆಳೆದಿದ್ದಾರೆ.
ಘಟನೆ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದ್ದು, ಮರುದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾಗರಾಜು ಅವರು ಮೃತಪಟ್ಟಿದ್ದಾರೆ.
ಆರೋಪಿಗಳು ತಂದೆಯ ಫೋನ್ ಕಸಿದು ಪರಾರಿಯಾಗಿದ್ದರು. ಹೀಗಾಗಿ ಏನಾಗಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಮರುದಿನ ಅಪ್ಪನ ಸ್ನೇಹಿತರು ಕರೆ ಮಾಡಿದ್ದು, ಫೋನ್ ತೆಗೆಯದ ಕಾರಣ ನೋಡಲು ಹೋದಾಗ ಘಟನೆ ಬೆಳಕಿಗೆ ಬಂದಿತ್ತು. ಕೂಡಲೇ ಆಸ್ಪತ್ರೆ ಸಾಗಿಸಲು ಮುಂದಾಗಿದ್ದರು. ಆದರೆ,ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದಿದ್ದರು. ಆರೋಪಿಗಳು ಫೋನ್ ಕಸಿಯದಿದ್ದಿದ್ದರೆ ಅಪ್ಪ ಬದುಕುಳಿಯುತ್ತಿದ್ದರು ಎಂದು ನಾಗರಾಜು ಅವರ ಪುತ್ರ ದರ್ಶನ್ (22) ಅವರು ಕಣ್ಣೀರಿಟ್ಟಿದ್ದಾರೆ.
Advertisement