
ಬೆಂಗಳೂರು: ತೀವ್ರ ಸಂಚಲನ ಮೂಡಿಸಿದ್ದ ನಗರದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯನ್ನು ಕೇರಳದ ಹಳ್ಳಿಯೊಂದರಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಆರೋಪಿಯು ವಸತಿ ಪ್ರದೇಶದಲ್ಲಿ ಬೆಳಗಿನ ಜಾವ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಪೈಕಿ ಒಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವಿಡಿಯೋ ವೈರಲ್ ಆಗಿದ್ದು, ನಗರದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಉಂಟಾಗಿತ್ತು.
ಬಂಧಿತ ವ್ಯಕ್ತಿಯನ್ನು 26 ವರ್ಷದ ಸಂತೋಷ್ ಡೇನಿಯಲ್ ಎಂದು ಗುರುತಿಸಲಾಗಿದೆ. ಸದ್ದುಗುಂಟೆಪಾಳ್ಯ ಪೊಲೀಸರು ನೆರೆ ರಾಜ್ಯ ಕೇರಳದ ಹಳ್ಳಿಯೊಂದರಲ್ಲಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಘಟನೆಯ ಬಗ್ಗೆ ಏನನ್ನೂ ಬಹಿರಂಗಪಡಿಸದೆ ತನ್ನ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದಿದ್ದ. ವಿಚಾರಣೆಯ ಸಮಯದಲ್ಲಿ, ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, ಘಟನೆ ಬೆಳಕಿಗೆ ಬಂದ ನಂತರ ಆರೋಪಿಯನ್ನು ಪತ್ತೆಹಚ್ಚಲು ಅವರು 1,600ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಆರೋಪಿ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಯಿತು ಮತ್ತು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ, ತಮಿಳುನಾಡು ಮತ್ತು ಕೇರಳದಲ್ಲಿ ಆತನಿಗಾಗಿ ಹುಡುಕಾಟ ನಡೆಸಿದರು.
ಘಟನೆ ಬೆಳಕಿಗೆ ಬಂದ ನಂತರ, ಆರೋಪಿ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು, ಪರಾರಿಯಾಗಿದ್ದ. ಮೊದಲು ಹೊಸೂರು ಮತ್ತು ಕೃಷ್ಣಗಿರಿಗೆ ಪ್ರಯಾಣ ಬೆಳೆಸಿದ್ದನು. ನಂತರ ಆತ ಕೇರಳಕ್ಕೆ ತೆರಳಿದ್ದನು. ಬೆಂಗಳೂರಿನಲ್ಲಿ ತನ್ನೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ಸ್ನೇಹಿತನ್ನು ಸಂಪರ್ಕಿಸಿ ಅಲ್ಲಿ ಆಶ್ರಯ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿವಾಸಿ ಲೋಕೇಶ್ ಗೌಡ ಎಂಬುವವರು ಸಲ್ಲಿಸಿದ ದೂರಿನ ಆಧಾರದ ಮೇಲೆ ತನಿಖೆ ಪ್ರಾರಂಭಿಸಿದ ಪೊಲೀಸರು, ಆರೋಪಿಯ ಬೈಕ್ ನೋಂದಣಿ ಸಂಖ್ಯೆಯನ್ನು ಗುರುತಿಸುವಲ್ಲಿ ಯಶಸ್ವಿಯಾದರು. ಬಳಿಕ ಬೆಂಗಳೂರಿನಲ್ಲಿ ಆತನ ವಿಳಾಸ ಪತ್ತೆಹಚ್ಚಿದರು ಮತ್ತು ಹುಡುಕಾಟ ನಡೆಸಿದರು.
ಆರೋಪಿಯು ನಿರುದ್ಯೋಗಿಯಾಗಿದ್ದು, ಆತ ಒಂದಿಲ್ಲೊಂದು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದವನಂತೆ ಕಾಣುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.
ಪೊಲೀಸರ ಪ್ರಕಾರ, ಏಪ್ರಿಲ್ 3ರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಇಬ್ಬರು ಮಹಿಳೆಯರು ಸದ್ದುಗುಂಟೆಪಾಳ್ಯದ ಭಾರತಿ ಲೇಔಟ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ಅವರಲ್ಲಿ ಒಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದರು.
Advertisement