
ಬೆಂಗಳೂರು: ಸ್ಮೋಕಿಂಗ್ ಝೋನ್’ಇಲ್ಲದ ಹೋಟೆಲ್, ಬಾರ್ ಗಳಿಗೆ ಪರವಾನಗಿ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಬಿಬಿಎಂಪಿ ಆರೋಗ್ಯ ಇಲಾಖೆ ಬಾರ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ ಗಳಂತಹ 412 ಮಾಲೀಕರಿಗೆ ನೋಟಿಸ್ ಕಳುಹಿಸಿದ್ದು, ಸ್ಮೋಕಿಂಗ್ ಝೋನ್ ನಿರ್ಮಿಸುವಂತೆ ಸೂಚಿಸಿದೆ.
ನೋಟಿಸ್ ನೀಡಿದ ದಿನಾಂಕದಿಂದ ಒಂದು ವಾರದ ಕಾಲಾವಕಾಶವನ್ನೂ ನೀಡಿದ್ದು, ತಪ್ಪಿದಲ್ಲಿ ಟ್ರೇಡ್ ಲೈಸೆನ್ಸ್ ಅಮಾನತುಗೊಳಿಸಲಾಗುವುದು ಎಂದು ಸೂಚಿಸಲಾಗಿದೆ. ಜೂನ್ 22, 2022 ರ ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ 2003 (COTPA) ಸೆಕ್ಷನ್ 4 ರ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.
ಇದರಲ್ಲಿ ಬಾರ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು 30 ಅಥವಾ ಅದಕ್ಕಿಂತ ಹೆಚ್ಚಿನ ಆಸನಗಳನ್ನು ಹೊಂದಿರುವ ಯಾವುದೇ ಸಂಸ್ಥೆಗಳು ಧೂಮಪಾನ ಮಾಡಲು ಪ್ರತ್ಯೇಕ ಪ್ರದೇಶವನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಸಿರಾಜುದ್ದೀನ್ ಮದನಿ ಹೇಳಿದ್ದಾರೆ.
ಈ ಸಂಬಂಧ ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತರು ಪೊಲೀಸ್, ಅಬಕಾರಿ ಇಲಾಖೆ ಮತ್ತು ಶಿಕ್ಷಣ ಇಲಾಖೆಯೊಂದಿಗೆ ಸಭೆ ನಡೆಸಿದ್ದು, ನಿಯಮ ಉಲ್ಲಂಘಿಸುವ ರೆಸ್ಟೋರೆಂಟ್, ಬಾರ್ ಅಥವಾ ಹೋಟೆಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 308 ಮತ್ತು 314 ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಮತ್ತು ಪರವಾನಗಿಯನ್ನು ಅಮಾನತುಗೊಳಿಸುವಂತೆ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಎಚ್‌ಒ ಮತ್ತು ಇತರ ಅಧಿಕಾರಿಗಳು ನೋಟಿಸ್ ನೀಡಿದ ಸಂಸ್ಥೆಗಳನ್ನು ಮರು ಪರಿಶೀಲಿಸುತ್ತಾರೆ. ಅವರು ಸೂಚನೆಯನ್ನು ಅನುಸರಿಸದಿದ್ದರೆ, ಟ್ರೇಡ್ ಲೈಸೆನ್ಸ್ ಅನ್ನು ಅಮಾನತ್ತಿನಲ್ಲಿಡಲು ಮತ್ತು ದಂಡವನ್ನು ವಿಧಿಸಲು ಕ್ರಮವನ್ನು ಪ್ರಾರಂಭಿಸಲಾಗುವುದು. ಈ ಸಂಸ್ಥೆಗಳ ಮಾಲೀಕರಿಗೆ ನೋಟಿಸ್ ನೀಡಿದ ಏಳು ದಿನಗಳ ಒಳಗೆ ಆದೇಶ ಪಾಲಿಸಲು ಸೂಚಿಸಲಾಗಿದೆ.
ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂದು ಪರಿಶೀಲಿಸಲು ಎಂಟು ವಲಯಗಳಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು 94 ಉಲ್ಲಂಘನೆಯಾಗಿರುವುದನ್ನು ಪತ್ತೆ ಮಾಡಿದ್ದಾರೆ. ಅದೇ ರೀತಿ ಬೊಮ್ಮನಹಳ್ಳಿಯಲ್ಲಿ 72, ಪೂರ್ವದಲ್ಲಿ 63 ಉಲ್ಲಂಘನೆ ಕಂಡುಬಂದಿದ್ದು, ಎಲ್ಲರಿಗೂ ನೋಟಿಸ್ ಕಳುಹಿಸಲಾಗಿದೆ.
Advertisement