
ಬೆಂಗಳೂರು: ಬರೊಬ್ಬರಿ 10 ಕೋಟಿ ರೂ ಮೌಲ್ಯದ ದುಬಾರಿ Lamborghini ಕಾರಿಗೆ ನಡುರಸ್ತೆಯಲ್ಲೇ ಬೆಂಕಿ ಹೊತ್ತುಕೊಂಡಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಬೆಂಗಳೂರಿನಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಅವೆಂಟಡಾರ್ ಸ್ಪೋರ್ಟ್ಸ್ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಗಳೂರಿನ ಮಾರತ್ ಹಳ್ಳಿ ಬಳಿ ರಸ್ತೆ ಮಧ್ಯೆ ಸಂಚರಿಸುವಾಗ ಇನ್ ಫ್ಲುಯೆನ್ಸರ್ ಸಂಜೀವ್ ಎನ್ನವರಿಗೆ ಸೇರಿದ ಲ್ಯಾಂಬೋರ್ಗಿನಿ ಕಾರಿನ ಇಂಜಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.
ಕಾರಿನ ಹಿಂಬದಿಯಲ್ಲಿ ಬರುತ್ತಿದ್ದ ವಾಹನ ಸವಾರರು ಮತ್ತು ಸ್ಥಳೀಯರ ಈ ಕುರಿತು ಕಾರು ಚಲಾಯಿಸುತ್ತಿದ್ದ ಸಂಜೀವ್ ಅವರಿಗೆ ಎಚ್ಚರಿಸಿದ್ದು, ಕೂಡಲೇ ಸಂಜೀವ್ ಕಾರು ನಿಲ್ಲಿಸಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಬೆಂಕಿಗಾಹುತಿಯಾಗಬೇಕಿದ್ದ ಕಾರನ್ನು ನೀರು ಹಾಕಿ ಬೆಂಕಿ ನಂದಿಸಿದ್ದಾರೆ.
ವಿಡಿಯೋ ವೈರಲ್
ಸೂಪರ್‌ಕಾರ್‌ಗೆ ಬೆಂಕಿ ಹೊತ್ತಿಕೊಂಡಿರುವ ದೃಶ್ಯಗಳು ವೈರಲ್ ಆಗಿವೆ. ವಾಹನದ ಹಿಂಭಾಗದಲ್ಲಿ ಎಂಜಿನ್ ಇರುವ ಸ್ಥಳದಲ್ಲಿ ಬೆಂಕಿಯನ್ನು ನಂದಿಸಲು ಜನರು ನೀರು ಸುರಿಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ವಾಹನ ಮತ್ತು ಮರಳಿನ ಬಕೆಟ್‌ಗಳನ್ನು ಹಿಡಿದು ಬೆಂಕಿ ನಂದಿಸಲು ಯತ್ನಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಸ್ಪೋರ್ಟ್ಸ್ ಕಾರು ಸುಟ್ಟುಹೋಗಿದೆ ಎಂದು ಕೆಲವರು ಹೇಳಿಕೊಂಡರೂ, ವಾಹನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ಸಂಜೀವ್ ನಂತರ ಸ್ಪಷ್ಟಪಡಿಸಿದ್ದಾರೆ.
ಲ್ಯಾಂಬೋರ್ಘಿನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಮುಂಬೈನ ಕರಾವಳಿ ರಸ್ತೆಯಲ್ಲಿ ಸುಮಾರು 10 ಕೋಟಿ ರೂ. ಬೆಲೆಬಾಳುವ ಲ್ಯಾಂಬೋರ್ಘಿನಿ ರೆವೆಲ್ಟೊ ಬೆಂಕಿಗೆ ಆಹುತಿಯಾದಾಗ ಸ್ಪೋರ್ಟ್ಸ್ ಕಾರ್ ಬ್ರ್ಯಾಂಡ್ ಸುದ್ದಿ ಮಾಡಿತ್ತು.
ಯಾರು ಈ ಸಂಜೀವ್?
ಅಂದಹಾಗೆ ಈ ಸ್ಪೋರ್ಟ್ಸ್ ಕಾರು ಸಾಮಾಜಿಕ ಮಾಧ್ಯಮದ ಪ್ರಭಾವಿ ಸಂಜೀವ್ ಅವರದ್ದು, ಅವರು ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಿಮ್ಮ ಮನೆ ಮಗ ಸಂಜು ಎಂದೇ ಪ್ರಸಿದ್ಧರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಸಾಮಾಜಿಕ ಮಾಧ್ಯಮದ ಇನ್ ಫ್ಲುಯೆನ್ಸರ್ ಸಂಜೀವ್ ಹಲವಾರು ಉನ್ನತ ದರ್ಜೆಯ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅವರು ತಾನು ರೈತ ಎಂದು ಗುರುತಿಸಿಕೊಂಡಿದ್ದು, ಆದಾಗ್ಯೂ ಕುತ್ತಿಗೆ ಮತ್ತು ಕೈಗಳಲ್ಲಿ ದಪ್ಪನಾದ ಚಿನ್ನದ ಆಭರಣಗಳನ್ನು ಧರಿಸಿ ಗಮನ ಸೆಳೆಯುತ್ತಾರೆ.
Advertisement