
ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಲೂಪ್ ಪರಿಶೀಲನೆಯ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಲಾಯಿಸಿದ್ದ ದ್ವಿಚಕ್ರ ವಾಹನದ ಮೇಲಿದ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ವಿಧಿಸಲಾಗಿದ್ದ 18,500 ರೂ. ದಂಡವನ್ನು ವಾಹನ ಮಾಲೀಕರು ಪಾವತಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಂಚಾರ ಪೊಲೀಸರ ಪ್ರಕಾರ, ವಾಹನದ ಮಾಲೀಕರು ಆಗಸ್ಟ್ 6 ರಂದು ಆರ್‌ಟಿ ನಗರ ಸಂಚಾರ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾಗಿ ದಂಡದ ಪೂರ್ಣ ಮೊತ್ತವನ್ನು ಪಾವತಿಸಿದ್ದಾರೆ.
ಆಗಸ್ಟ್ 5 ರಂದು ಹೆಬ್ಬಾಳ ಫ್ಲೈಓವರ್ ಲೂಪ್ ಪರಿಶೀಲನೆ ವೇಳೆ ಡಿಕೆ ಶಿವಕುಮಾರ್ ದ್ವಿಚಕ್ರ ವಾಹನವನ್ನು ಚಲಾಯಿಸಿದ್ದರು. ಬೆಂಗಳೂರು ಸಂಚಾರ ಪೊಲೀಸರ ವೆಬ್‌ಸೈಟ್ ಪ್ರಕಾರ, ಆ ದ್ವಿಚಕ್ರ ವಾಹನದ ಮೇಲೆ 34 ಸಂಚಾರ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದವು.
ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು, ಸವಾರಿ ಮಾಡುವಾಗ ಮೊಬೈಲ್ ಫೋನ್ ಬಳಸುವುದು ಮತ್ತು ಪ್ರವೇಶ ನಿಷೇಧ ಅಥವಾ ಏಕಮುಖ ಸಂಚಾರದಲ್ಲಿ ಸಂಚರಿಸಿರುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳಿಗಾಗಿ ವಾಹನದ ಮೇಲೆ ಪ್ರಕರಣಗಳು ದಾಖಲಾಗಿದ್ದವು.
ಡಿಕೆ ಶಿವಕುಮಾರ್ ತಮ್ಮ ಅಧಿಕೃತ X' ಖಾತೆಯಲ್ಲಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಆಗಸ್ಟ್ 15 ರಂದು ಹೆಬ್ಬಾಳ ಫ್ಲೈಓವರ್ ಲೂಪ್ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ತಿಳಿಸಿದ್ದರು.
Advertisement