
ಬೆಂಗಳೂರು: 14 ವರ್ಷದ ಬಾಲಕನ ಕುತ್ತಿಗೆಗೆ ಆತನ ತಾಯಿಯ ಚಿಕ್ಕಪ್ಪನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆ ನಡೆದ ಮೂರು ದಿನಗಳ ನಂತರ ಆರೋಪಿ ಶರಣಾಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಆನ್ ಲೈನ್ ಗೇಮ್ ಗೀಳಿಗೆ ಬಿದಿದ್ದ ಹದಿಹರೆಯದ ಬಾಲಕ ಶಾಲೆ ತೊರೆದಿದ್ದ. ಆನ್ ಲೈನ್ ಗೇಮ್ ಗಾಗಿ ಹಣ ನೀಡುವಂತೆ ಆಗಾಗ್ಗೆ ತನ್ನ ಚಿಕ್ಕಪ್ಪನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ಆಗಸ್ಟ್ 4 ರಂದು ಮುಂಜಾನೆ 5 ಗಂಟೆ ಸುಮಾರಿಗೆ ಕುಂಬಾರಹಳ್ಳಿಯಲ್ಲಿ ಹತ್ಯೆ ಘಟನೆ ನಡೆದಿತ್ತು. ಬಾಲಕ ತನ್ನ ಚಿಕ್ಕಪ್ಪ ನಾಗಪ್ರಸಾದ್ ನೊಂದಿಗೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದನ್ನು ಸಹಿಸಲಾಗದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನಾಗಪ್ರಸಾದ್, ಮಲಗಿದ್ದ ತನ್ನ ಸೋದರಳಿಯನಿಗೆ ಅಡುಗೆಮನೆಯ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 101 (ಕೊಲೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಘಟನೆ ನಡೆದ ಮೂರು ದಿನಗಳ ಬಳಿಕ ನಾಗಪ್ರಸಾದ್ ಪೊಲೀಸರಿಗೆ ಶರಣಾಗಿದ್ದು, ತಪೊಪ್ಪಿಕೊಂಡಿದ್ದಾನೆ. ತದನಂತರ ಪೊಲೀಸರು ಬಾಲಕನ ಕೊಳೆತ ಮೃತದೇಹವನ್ನು ವಶಕ್ಕೆ ಪಡೆದಿದ್ದು, ಹತ್ಯೆಗಾಗಿ ಬಳಸಿದ ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ನಾಗಪ್ರಸಾದ್ ಅವರನ್ನು ಬೆಂಗಳೂರಿನ ನ್ಯಾಯಾಲಯವೊಂದರ ಬಳಿ ಹಾಜರುಪಡಿಸಲಾಯಿತು. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
Advertisement