
ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸಲಾಗಿರುವ ಇ-ಪಿಒಎಸ್ (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್) ಸಾಧನವು ಪಡಿತರ ಸಂಗ್ರಹವನ್ನು ಶೇ.6.6ರಷ್ಟು ಹೆಚ್ಚಳವಾಗುವಂತೆ ಮಾಡಿದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಡೆಸಿದ ಅಧ್ಯಯನದಿಂದ ಈ ಮಾಹಿತಿ ತಿಳಿದುಬಂದಿದೆ.
ಹತ್ತಿರದ ಯಾವುದೇ ಅಂಗಡಿಗಳಲ್ಲಿ ಪಡಿತರ ಸಂಗ್ರಹಿಸುವ ಅವಕಾಶ ನೀಡಲಾಗಿದ್ದು, ಜನರು ಎಲೆಕ್ಟ್ರಾನಿಕ್ ಪಾಯಿಂಟ್-ಆಫ್-ಸೇಲ್ (ಇ-ಪೋಸ್) ಸಾಧನದ ಮೂಲಕ ಯಾವ ಅಂಗಡಿ ತೆರೆದಿವೆ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ. ಈ ಸಾಧನ ಅಳವಡಿಕೆಯಿಂದ ಪಡಿತರ ಸಂಗ್ರವು ಶೇ.6.6ರಷ್ಟು ಹೆಚ್ಚಳವಾಗಿದೆ ಎಂದು ಅಧ್ಯಯವು ತಿಳಿಸಿದೆ.
ಈ ಹಿಂದೆ ಭಾರತದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಸಾಮಾನ್ಯವಾಗಿ ತಮ್ಮ ಮಾಸಿಕ ಧಾನ್ಯ ಪಡಿತರಕ್ಕಾಗಿ ಕೇವಲ ಒಂದು ನ್ಯಾಯಯುತ ಬೆಲೆ ಅಂಗಡಿಗೆ (ಎಫ್‌ಪಿಎಸ್) ತೆರಳಬೇಕಿತ್ತು.
ಸಾಕಷ್ಟು ಸಂದರ್ಭದಲ್ಲಿ ಅಂಗಡಿಗಳು ಮುಚ್ಚಿರುವ, ಕೆಲವು ಅಂಗಡಿಯವರು ಜನರನ್ನು ನ್ಯಾಯಯುತವಾಗಿ ನಡೆಸಿಕೊಳ್ಳದ ಬೆಳವಣಿಗೆಗಳು ಕಂಡು ಬರುತ್ತಿದ್ದವು. ಪ್ರಸ್ತುತ ಪರಿಚಯಿಸಲಾಗಿರುವ ವ್ಯವಸ್ಥೆಯು ನಿಯೋಜಿಸಲಾದ ಅಂಗಡಿ ಚೆನ್ನಾಗಿ ಕೆಲಸ ಮಾಡದಿದ್ದರೆ, ಫಲಾನುಭವಿಗಳು ಅದನ್ನು ಸಹಿಸಿಕೊಳ್ಳುವುದು ಅಥವಾ ಪಡಿತರ ಸಂಗ್ರಹಿಸದೆ ಹೋಗುವ ಅಗತ್ಯವಿಲ್ಲ. ಬದಲಿಗೆ ಮತ್ತೊಂದು ಅಂಗಡಿಗೆ ತೆರಳುವ ಅವಕಾಶ ನೀಡಲಾಗುತ್ತದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ 8 ಮಿಲಿಯನ್‌ಗಿಂತಲೂ ಹೆಚ್ಚು ಫಲಾನುಭವಿಗಳನ್ನು ಒಳಗೊಂಡ ಸಂಶೋಧನೆಯನ್ನು ನಡೆಸಲಾಗಿದೆ. ಈ ರಾಜ್ಯಗಳಲ್ಲಿ ಅದಾಗಲೇ ಇಪಿಒಎಸ್ ಸಾಧನಗಳನ್ನು ಅಳವಡಿಸಲಾಗಿರುವುದರಿಂದ ಅಲ್ಲಿ ಹೊಸ ವ್ಯವಸ್ಥೆಯ ಅಗತ್ಯತೆ ಕಂಡು ಬಂದಿಲ್ಲ. ಇಲ್ಲಿ ಪಡಿತರ ಸಂಗ್ರಹವು ನಾಲ್ಕು ಪಟ್ಟು ಹೆಚ್ಚಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ.
ಹೊಸ ವ್ಯವಸ್ಥೆ ಅಳವಡಿಕೆಯಿಂದ ಅಂಗಡಿಯವರು ತಮ್ಮ ಸೇವೆಯನ್ನು ಸುಧಾರಿಸುವ ಮತ್ತು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಪಡಿತರ ವಿತರಿಸುವ, ನಿಯಮಗಳನ್ನು ಅನುಸರಿಸುವಂತೆ ಪ್ರೇರೇಪಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.
Advertisement