
ಬೆಂಗಳೂರು: ಶುಕ್ರವಾರ ಇಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ 10 ವರ್ಷದ ಬಾಲಕ ಸಾವಿಗೀಡಾಗಿದ್ದು, ಘಟನೆಯಲ್ಲಿ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಫೋಟದ ಸ್ಥಳ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿದ ನಂತರ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು ಮತ್ತು ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.
ಸಂತ್ರಸ್ತ ಬಾಲಕನನ್ನು ಮುಬಾರಕ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಮಧ್ಯ ಭಾಗದ ವಿಲ್ಸನ್ ಗಾರ್ಡನ್‌ನ ಚಿನ್ನಯ್ಯನಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಆ ಪ್ರದೇಶದಲ್ಲಿ ಮನೆಗಳು ಒಂದಕ್ಕೊಂದು ಹೊಂದಿಕೊಂಡಿದ್ದು, ಹೆಚ್ಚಿನ ಜನರು ವಾಸಿಸುತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿಲಿಂಡರ್ ಸ್ಫೋಟವೇ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಯಾವುದೇ ವಾಸನೆ ಇಲ್ಲ. ಆದರೆ, ಪೊಲೀಸರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವರದಿಗಳ ಪ್ರಕಾರ, ಸಿಲಿಂಡರ್ ಸ್ಫೋಟ ಸಂಭವಿಸಿರಬಹುದು. ಒಂಬತ್ತು ಜನರು ಗಾಯಗೊಂಡಿದ್ದಾರೆ ಮತ್ತು ಮುಬಾರಕ್ ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಹೇಳಿದರು.
ಸ್ಫೋಟದಲ್ಲಿ 12 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಈ ಹಿಂದೆ ಹೇಳಿದ್ದರು.
ಸ್ಫೋಟ ಸಂಭವಿಸಿದ ಮನೆ ಕಸ್ತೂರಮ್ಮ ಎಂಬುವವರಿಗೆ ಸೇರಿದ್ದು, ಅವರು ಕೂಡ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಮನೆಗಳಿಗೆ ಹಾನಿಗೊಳಗಾಗಿವೆ. ಈ ಮನೆಗಳನ್ನು ದುರಸ್ತಿ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದೇನೆ. ಮನೆ ಸಂಪೂರ್ಣವಾಗಿ ಕುಸಿದಿದ್ದರೆ, ನಾವು ಅವುಗಳನ್ನು ನಿರ್ಮಿಸುತ್ತೇವೆ ಎಂದು ಸಿಎಂ ಹೇಳಿದರು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸ್ಫೋಟ ಸಂಭವಿಸಿದ ಮನೆಯಲ್ಲಿ ಮೂವರು ಸದಸ್ಯರಿದ್ದ ಕುಟುಂಬವೊಂದು ಬಾಡಿಗೆಗೆ ವಾಸವಿತ್ತು. ಆ ವ್ಯಕ್ತಿ ಕೂಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿದ್ದ ತಾಯಿ ಮತ್ತು ಮಗು ಗಾಯಗೊಂಡಿದ್ದರು. ಆದರೆ, ಮೃತಪಟ್ಟ ಹುಡುಗ ಪಕ್ಕದ ಮನೆಯವನು' ಎಂದು ಹೇಳಿದರು.
ಬೆಳಿಗ್ಗೆ 8.30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂತು. ನಾವು ತಕ್ಷಣ ಬಾಂಬ್ ನಿಷ್ಕ್ರಿಯ ದಳ, ಭಯೋತ್ಪಾದನಾ ನಿಗ್ರಹ ದಳ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ನಾವು ಹಾನಿಗೊಳಗಾದ ಮನೆಗಳನ್ನು ತೆರವುಗೊಳಿಸುತ್ತಿದ್ದೇವೆ, ತನಿಖೆ ನಡೆಯುತ್ತಿದೆ ಎಂದು ಸಿಂಗ್ ಹೇಳಿದರು.
Advertisement