
ಬೆಳಗಾವಿ: ಅಕ್ರಮ ಸಂಬಂಧಕ್ಕೆ ಒಪ್ಪದ ಬಾಲ್ಯದ ಗೆಳತಿಯನ್ನು ಮನಸೋಚ್ಛೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ಎರಡು ಮಕ್ಕಳ ತಾಯಿ 30 ವರ್ಷದ ರೇಷ್ಮಾ ಎಂಬಾಕೆಯನ್ನು ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದನು. ಆಕೆ ಬೇಡ ಅಂದಿದ್ದಕ್ಕೆ 31 ವರ್ಷದ ಆನಂದ್ ಸುತಾರ್ ರೇಷ್ಮಾಗೆ ಚೂರಿಯಿಂದ 9 ಬಾರಿ ಇರಿದು ನಂತರ ತಾನೂ ಅದೇ ಚೂರಿಯಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಒಂದೇ ಗ್ರಾಮದವರಾಗಿದ್ದರಿಂದ ರೇಷ್ಮಾ ಮತ್ತು ಆನಂದ ನಡುವೆ ಚಿಕ್ಕ ವಯಸ್ಸಿನಿಂದಲೂ ಸಲುಗೆ ಇತ್ತು. ದೊಡ್ಡವರಾಗುತ್ತಿದ್ದಂತೆ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಈ ವಿಚಾರ ರೇಷ್ಮಾ ಅವರ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ, ಪೋಷಕರು ಆಕೆಗೆ ಅದೇ ಗ್ರಾಮದ ಶಿವಾನಂದ್ ಎಂಬುವರ ಜೊತೆಗೆ ಮದುವೆ ಆಗಿತ್ತು. ಹೀಗಾಗಿ ಆನಂದ ಸಹ ಬೇರೊಂದು ಯುವತಿ ಜೊತೆ ಮದುವೆಯಾಗಿದ್ದನು.
ರೇಷ್ಮಾ ಮತ್ತು ಶಿವಾನಂದ್ ದಂಪತಿಗೆ ಇಬ್ಬರು ಮಕ್ಕಳಿದ್ದರೆ ಆನಂದ್ ದಂಪತಿಗೂ ಮೂವರು ಮಕ್ಕಳಿದ್ದಾರೆ. ಆದರೆ ರೇಷ್ಮಾ ಮತ್ತು ಆನಂದ್ ನಡುವೆ ಸಂಬಂಧ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ಶಿವಾನಂದ್ ಗೆ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪೊಲೀಸರು ಆನಂದ್ ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಬಳಿಕ ರೇಷ್ಮಾ ಆನಂದನಿಂದ ಅಂತರ ಕಾಯ್ದುಕೊಂಡಿದ್ದಳು. ಆದರೆ ಆನಂದ್ ರೇಷ್ಮಾಳನ್ನು ಪೀಡಿಸುತ್ತಿದ್ದು ಕೊಲೆಯ ಹಂತಕ್ಕೆ ಹೋಗಿದ್ದಾನೆ.
Advertisement