
ಬೆಂಗಳೂರು: ನಗರತ್‌ಪೇಟೆಯ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ರಾಜಸ್ಥಾನ ಮೂಲದ ಮದನ್ ಎಂಬುವರ ಸಜೀವದಹನವಾಗಿದ್ದಾರೆ.
ಮಹಿಳೆ ಹಾಗೂ ಇಬ್ಬರು ಮಕ್ಕಳು ಕಟ್ಟಡದ ಒಳಗೆ ಸಿಲುಕಿರುವ ಶಂಕೆಯಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ದುರಂತ ನಡೆದ ಮಳಿಗೆಯಲ್ಲಿ ಒಂದೇ ಕುಟುಂಬದ ಇನ್ನೂ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಒಟ್ಟು ನಾಲ್ವರು ಮನೆಯಲ್ಲಿ ವಾಸಿಸುತ್ತಿದ್ದರು.
ಮನೆಯಲ್ಲಿ ಪತಿ, ಪತ್ನಿ ಹಾಗೂ 8 ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದರು. ಮದನ್ ಸಿಂಗ್ ಎಂಬಾತ ಸಾವನ್ನಪ್ಪಿದ್ದು, ಉಳಿದ ಮೂವರು ಸಾವನ್ನಪ್ಪಿರುವ ಶಂಕ್ಯೆ ವ್ಯಕ್ತವಾಗಿದೆ. ನಾಲ್ಕು ತಾಸು ಕಾರ್ಯಾಚರಣೆ ನಡೆಸಿದರೂ ಮೂವರ ಸುಳಿವು ಸಿಕ್ಕಿಲ್ಲ. ಕಾರ್ಯಾಚರಣೆ ಮುಂದುವರೆದಿದೆ.
ಬೆಳಗಿನ ಜಾವ 3.14 ರ ಸುಮಾರಿಗೆ ತಮಗೆ ಕರೆ ಬಂದಿದ್ದು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿಯನ್ನು ಇನ್ನೂ ನಂದಿಸಲಾಗಿಲ್ಲ ಎಂದು ಅಗ್ನಿ ಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ ಮುಂಜಾನೆ ಈ ಬೆಂಕಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಎಂಟು ವಾಹನಗಳನ್ನು ನಿಯೋಜಿಸಲಾಗಿದ್ದು, 55 ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು 21 ಅಧಿಕಾರಿಗಳು ಸ್ಥಳದಲ್ಲಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಫ್ಲೋರ್‌ಮ್ಯಾಟ್ ತಯಾರಿಸುವ ಘಟಕವಿತ್ತು. ಮೊದಲಿಗೆ ಅಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ.
Advertisement