
ಬೆಂಗಳೂರು: ಬೈಕ್ ಟ್ಯಾಕ್ಸಿ ವಿಚಾರವಾಗಿ ಮಹತ್ವದ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್ ಅಗ್ರಿಗೇಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಬಹುದು.. ಆದರೆ ಬೈಕ್ ಟ್ಯಾಕ್ಸಿ ಚಾಲಕರಿಗೆ ಕಿರುಕುಳ ನೀಡಬಾರದು ಎಂದು ಸ್ಪಷ್ಟಪಡಿಸಿದೆ.
ಹೌದು.. ನಿನ್ನೆಯಿಂದ ಕರ್ನಾಟಕದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಪುನಾರಂಭಗೊಂಡಿದ್ದು, ಉಬರ್ ಮತ್ತು ರ್ಯಾಪಿಡೋ ಸಂಸ್ಥೆಗಳು ಬೈಕ್ ಟ್ಯಾಕ್ಸಿ ಸೇವೆಯನ್ನು ಪುನಾರಂಭಿಸಿವೆ. ಆ್ಯಪ್ ಆಧಾರಿತ ಸೇವೆ ಪುನಾರಂಭಗೊಂಡಿದ್ದು, ಈ ಕುರಿತು ಸಾಕಷ್ಟ ಗೊಂದಲಗಳು ಸೃಷ್ಟಿಯಾಗಿವೆ.
ಇದರ ನಡುವೆಯೇ ಶುಕ್ರವಾರ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ಣಯ ಕೈಗೊಂಡಿದ್ದು, 'ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡಲು ಪ್ರಾರಂಭಿಸಿರುವ ಅಗ್ರಿಗೇಟರ್‌ಗಳ ವಿರುದ್ಧ ನೀವು (ಅಧಿಕಾರಿಗಳು) ಕಾನೂನು ಪ್ರಕಾರ ಯಾವುದೇ ಕ್ರಮ ಕೈಗೊಳ್ಳಬಹುದು. ಆ್ಯಪ್ ಆಧಾರಿತ ಸಂಸ್ಥೆಗಳಿಗೆ ನ್ಯಾಯಾಲಯವು ಅಂತಹ ಯಾವುದೇ ಸ್ವಾತಂತ್ರ್ಯವನ್ನು ನೀಡಲಿಲ್ಲ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಶುಕ್ರವಾರ ಕಲಾಪ ಆರಂಭವಾದಾಗ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ಅಪ್ಲಿಕೇಶನ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ನೀಡುವವರು ಸೇವೆ ಆರಂಭಿಸಿದ್ದಾರೆ. ಕ್ರಮ ತೆಗೆದುಕೊಳ್ಳುವುದಕ್ಕೂ ಮುನ್ನ ನ್ಯಾಯಾಲಯದ ಗಮನಕ್ಕೆ ತರುವುದು ನನ್ನ ಕರ್ತವ್ಯ ಎಂದರು.
ಬೈಕ್ ಟ್ಯಾಕ್ಸಿ ಚಾಲಕರ ಪರವಾಗಿ ಹಾಜರಾಗಿದ್ದ ವಕೀಲ ಗಿರೀಶ್ ಕುಮಾರ್, ಸರ್ಕಾರ ಅಪ್ಲಿಕೇಶನ್ ವಿರುದ್ಧ ಕ್ರಮಕೈಗೊಳ್ಳಬಹುದು. ಅಪ್ಲಿಕೇಶನ್ ಆಧರಿಸಿ ಸೇವೆ ನೀಡುವ ಟ್ಯಾಕ್ಸಿಗಳ ಮೇಲಲ್ಲ. ವ್ಯಕ್ತಿಗತ ಬೈಕ್‌ಗಳನ್ನು ಜಫ್ತಿ ಮಾಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಅಡ್ವೊಕೇಟ್ ಜನರಲ್ ಪ್ರತಿಕ್ರಿಯಿಸಿ, ವ್ಯಕ್ತಿಗತ ಬೈಕ್ ಟ್ಯಾಕ್ಸಿ ಸೇವೆ ನೀಡುವವರನ್ನು ಬಂಧಿಸಿಲ್ಲ. ಈ ವಾದ ಸರಿಯಲ್ಲ. ಅವರನ್ನು ನಾವು ಬಂಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಷೇಧಿಸಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಹೊರಡಿಸಿರುವ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್ ಹಾಗೂ ರ್ಯಾಪಿಡೋ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ವೇಳೆ, ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದ ತೀರ್ಮಾನವನ್ನು ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದು ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಬೈಕ್ ಟ್ಯಾಕ್ಸಿ ಸೇವೆಯನ್ನು ಹಲವರು ಜೀವನೋಪಾಯಕ್ಕಾಗಿ ಅವಲಂಬಿಸಿರುವುದರಿಂದ ಈ ವಿಚಾರದ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸಲಹೆ ನೀಡಿತ್ತು.
ಬೈಕ್ ಟ್ಯಾಕ್ಸಿ ಚಾಲಕರಿಗೆ ಕಿರುಕುಳ ಬೇಡ
ಇದೇ ವೇಳೆ ನ್ಯಾಯಾಲಯ ಬೈಕ್ ಟ್ಯಾಕ್ಸಿ ಸೇವೆ ನೀಡುವ ಚಾಲಕರಿಗೆ ಕಿರುಕುಳ ನೀಡಬಾರದು ಎಂದೂ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದು, ಅಡ್ವೊಕೇಟ್ ಜನರಲ್ (ಎಜಿ) ಕೆ ಶಶಿಕಿರಣ್ ಶೆಟ್ಟಿ ಅವರಿಗೆ ವೈಯಕ್ತಿಕ ಬೈಕ್ ಟ್ಯಾಕ್ಸಿ ಮಾಲೀಕರು ಅಥವಾ ಚಾಲಕರಿಗೆ ಕಿರುಕುಳ ನೀಡಬಾರದು ಎಂದು ನ್ಯಾಯಾಲಯ ಹೇಳಿದೆ.
ಆಗಸ್ಟ್ 20 ರಂದು ನ್ಯಾಯಾಲಯವು ಈ ವಿಷಯವನ್ನು ವಿಚಾರಣೆ ನಡೆಸುವಾಗ ಉಬರ್, ಓಲಾ ಮತ್ತು ರ್ಯಾಪಿಡೊದಂತಹ ಸಮುದಾಯ ಟ್ಯಾಕ್ಸಿಗಳನ್ನು ನೀಡಲು ಪ್ರಾರಂಭಿಸಿದ್ದರೂ, ಅವುಗಳಿಗೆ ಅಂತಹ ಯಾವುದೇ ಸ್ವಾತಂತ್ರ್ಯವನ್ನು ನೀಡಿಲ್ಲ ಎಂದು ಎಜಿ ದೂರಿದಾಗ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ಮೌಖಿಕವಾಗಿ ಸ್ಪಷ್ಟಪಡಿಸಿತು.
ಏತನ್ಮಧ್ಯೆ, ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘದ ವಕೀಲರು, ನ್ಯಾಯಾಲಯದ ಸ್ಪಷ್ಟ ಸೂಚನೆಗಳ ಹೊರತಾಗಿಯೂ ಸಾರಿಗೆ ಇಲಾಖೆಯ ಅಧಿಕಾರಿಗಳು ವೈಯಕ್ತಿಕ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡು ಆ ಟ್ಯಾಕ್ಸಿಗಳ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಗಮನಸೆಳೆದರು. ನಂತರ ನ್ಯಾಯಾಲಯವು ವೈಯಕ್ತಿಕ ಬೈಕ್ ಟ್ಯಾಕ್ಸಿ ಮಾಲೀಕರು-ಚಾಲಕರು ಅಧಿಕಾರಿಗಳಿಂದ ಕಿರುಕುಳಕ್ಕೊಳಗಾಗದಂತೆ ನೋಡಿಕೊಳ್ಳಲು ಲಿಖಿತ ಆದೇಶವನ್ನು ನೀಡಬಹುದು ಎಂದು ಎಜಿಗೆ ತಿಳಿಸಿತು. ಇದಕ್ಕೆ ಉತ್ತರವಾಗಿ, ಅಧಿಕಾರಿಗಳಿಗೆ ಸೂಕ್ತವಾಗಿ ಸೂಚನೆ ನೀಡುವುದಾಗಿ ಎಜಿ ನ್ಯಾಯಾಲಯಕ್ಕೆ ತಿಳಿಸಿದರು.
ವಿಚಾರಣೆ ಮುಂದೂಡಿಕೆ
ಬಳಿಕ ನ್ಯಾಯಾಲಯವು ವಿಷಯವನ್ನು ಸೆಪ್ಟೆಂಬರ್ 22 ಕ್ಕೆ ಮುಂದೂಡಿತು ಮತ್ತು ವೈಯಕ್ತಿಕ ಬೈಕ್ ಟ್ಯಾಕ್ಸಿ ಮಾಲೀಕರು ಅಥವಾ ಚಾಲಕರು ತಮ್ಮ ವಾಹನಗಳನ್ನು ನಿರ್ವಹಿಸುವುದಕ್ಕಾಗಿ ಯಾವುದೇ ಪ್ರಚೋದನಕಾರಿ ಕ್ರಮ ಕೈಗೊಳ್ಳದಂತೆ ಅಧಿಕಾರಿಗಳಿಗೆ ಸೂಚಿಸುವಂತೆ ಅಡ್ವೊಕೇಟ್ ಜನರಲ್ ಅವರನ್ನು ಕೇಳಿತು.
Advertisement