
ಬೆಂಗಳೂರು: ರಸ್ತೆ ನೋಡಿದರೆ ಎಲ್ಲೆಲ್ಲೂ ಗುಂಡಿ, ರಸ್ತೆಯಲ್ಲಿ ಸಾಗಲು ಸಾಧ್ಯವಾಗುಲ್ಲಿ. ನಮಗೆ ಮೂಲಕಭೂತ ಸೌಲಭ್ಯ ಒದಗಿಸಿ ಎಂದು ಶಾಲಾ ಮಕ್ಕಳು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಮಹಾದೇವಪುರ ವಿಧಾನಸಭಾ ಕ್ಷೇತ್ರದ ಕಾರ್ಮೆಲಾರಾಮ್, ಗುಂಜೂರ್ಪಾಳ್ಯ ಮತ್ತು ಚಿಕ್ಕಬೆಳ್ಳಂದೂರಿನ ಕೆಲವು ಮಕ್ಕಳು ರಸ್ತೆ ಗುಂಡಿ ಹಾಗೂ ಸಂಚಾರ ದಟ್ಟಣೆ ಸಮಸ್ಯೆ ಪರಿಹರುವಂತೆ ಪತ್ರ ಅಭಿಯಾನವನ್ನು ಆರಂಭಿಸಿದ್ದಾರೆ.
ಇಲ್ಲಿನ ಸಂಚರಿಸುವ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ 1.5 ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕುವಂತಾಗಿದೆ ಎಂದು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಹೊರ ವರ್ತುಲ ರಸ್ತೆಯಿಂದ ಕಾರ್ಮೆಲಾರಂವರೆಗಿನ 5 ಕಿ.ಮೀ. ಉದ್ದದ ರಸ್ತೆಗಳು ಕಿರಿದಾದ ಮತ್ತು ಕಳಪೆಯಿಂದ ಕೂಡಿದ್ದು, ಈ ರಸ್ತೆಯಲ್ಲಿ ಸಂಚರಿಸಲು ಪ್ರತಿದಿನ 1.5 ಗಂಟೆ ಸಮಯ ಬೇಕಾಗುತ್ತಿದೆ. ಭೂಸ್ವಾಧೀನ ಸಮಸ್ಯೆಗಳಿಂದಾಗಿ ಕಾರ್ಮೆಲಾರಂ ರೈಲ್ವೆ ಮೇಲ್ಸೇತುವೆ ಯೋಜನೆ ಸ್ಥಗಿತಗೊಂಡಿದೆ. ಗೇರ್ ಸ್ಕೂಲ್ ರಸ್ತೆ, ಎಇಟಿ ಜಂಕ್ಷನ್, ಕಾರ್ಮೆಲಾರಂನಿಂದ ಗುಂಜೂರು ರಸ್ತೆ ಮತ್ತು ವರ್ತೂರು ಮುಖ್ಯ ರಸ್ತೆ ಸೇರಿದಂತೆ ಈ ಪ್ರದೇಶದ ಹಲವಾರು ರಸ್ತೆಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಕಾರ್ಮೆಲಾರಂ ಯುನೈಟ್ ನ ನಾಗರಿಕ ಕಾರ್ಯಕರ್ತ ಜೋಸ್ ಥಜತುವೀಟ್ಟಿಲ್ ಅವರು ಹೇಳಿದ್ದಾರೆ.
ರಸ್ತೆಗಳು ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕಾರ್ಮೆಲಾರಂ, ಗುಂಜೂರುಪಾಳ್ಯ ಮತ್ತು ಚಿಕ್ಕಬೆಳ್ಳಂದೂರು ನಿವಾಸಿಗಳು ತಮ್ಮ ಮಕ್ಕಳು ಮೂಲಕ ಸಮಸ್ಯೆಯನ್ನು ಸರಿಪಡಿಸಲು ಡಿಸಿಎಂ ಬಳಿ ಹೋಗಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಪತ್ರ ಅಭಿಯಾನವನ್ನು ಆರಂಭಿಸಿದ್ದಾರೆ.
ಈ ಪ್ರದೇಶದ ಸುಮಾರು 100 ಮಕ್ಕಳು ರಸ್ತೆಗಳ ಕೆಟ್ಟ ಸ್ಥಿತಿಯ ಫೋಟೋಗಳೊಂದಿಗೆ ಬೆಂಗಳೂರು ಅಭಿವೃದ್ಧಿ ಸಚಿವರಿಗೆ ಪತ್ರ ಬರೆಯುತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿತ್ತಿದ್ದಾರೆಂದು ತಿಳಿಸಿದ್ದಾರೆ.
ಮಕ್ಕಳು ಬರೆದಿರುವ ಪತ್ರಗಳನ್ನು ಇಂದು (ಭಾನುವಾರ) ಪೋಸ್ಟ್ ಮಾಡಲಾಗುವುದು. ಮುಂದಿನ ಕೆಲವು ಬ್ಯಾಚ್‌ಗಳಲ್ಲಿ ತಲಾ 100 ಪತ್ರಗಳನ್ನು ವಿಧಾನಸೌಧದಲ್ಲಿರುವ ಡಿಸಿಎಂ ಕಚೇರಿಗೆ ಕಳುಹಿಸಲಾಗುವುದು. ಆನ್‌ಲೈನ್ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದ್ದು, ಈ ನಿಟ್ಟಿನಲ್ಲಿ 2,500 ಸಹಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.
2008 ರಿಂದ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿದ್ದರೂ, ಉತ್ತಮ ರಸ್ತೆಗಳು, ಚರಂಡಿಗಳು, ಪಾದಚಾರಿ ಮಾರ್ಗ ಮತ್ತು ಒಳಚರಂಡಿ ಮಾರ್ಗಗಳಂತಹ ಮೂಲಭೂತ ಅಭಿವೃದ್ಧಿಯು ಈ ಭಾಗದಲ್ಲಿ ಇನ್ನೂ ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಹದೇವಪುರ ವಲಯ ಆಯುಕ್ತ ರಮೇಶ್ ಅವರು ಮಾತನಾಡಿ, ಕಾರ್ಮೆಲಾರಾಮ್, ಗುಂಜೂರ್ಪಾಳ್ಯ ಮತ್ತು ಚಿಕ್ಕಬೆಳ್ಳಂದೂರಿನಲ್ಲಿ ಎದುರಾಗಿರುವ ಸಮಸ್ಯೆಗಳನ್ನು 30 ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಏತನ್ಮಧ್ಯೆ, ತಾತ್ಕಾಲಿಕವಾಗಿ ಸರಿಪಡಿಸಿದ ರಸ್ತೆಯ ಕೆಟ್ಟ ಸ್ಥಿತಿಯ ಕುರಿತು ಫೋಟೋ ಹಾಗೂ ವಿಡಿಯೋಗಳನ್ನು ಬಿಎಂ ಪ್ರಿಸ್ಟೈನ್ ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ದೀರ್ಘಕಾಲ ಬಾಳಿಕೆ ಬರುವ ಕೆಲಸ ಮಾಡುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ ಮಳೆಯಿಂದಾಗಿ ರಸ್ತೆ ಮತ್ತಷ್ಟು ಹದಗೆಟ್ಟಿದೆ. ರಸ್ತೆ ಮತ್ತೆ ಹಿಂದಿನ ಸ್ಥಿತಿಗೆ ಮರಳಿದೆ, ಹಲವಾರು ಗುಂಡಿಗಳಿವೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement