ರಸ್ತೆ ಗುಂಡಿ ಮುಚ್ಚುವ ಕಾರ್ಯ ವೇಗಗೊಳಿಸಿ: ಅಧಿಕಾರಿಗಳಿಗೆ BBMP ಸೂಚನೆ
ಬೆಂಗಳೂರು: ಮಳೆಯಿಂದಾಗಿ ನಗರದೆಲ್ಲೆಡೆ ಉಂಟಾಗಿರುವ ರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಸರ್. ಪುಟ್ಟಣ ಚೆಟ್ಟಿ ಪುರಭವನದಲ್ಲಿ ಮಂಗಳವಾರ ಬಿಬಿಎಂಪಿ ಎಂಜಿನಿಯರ್‌ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಅನುಸರಿಸಿರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಮುಚ್ಚುವಂತೆ ಹಾಗೂ ಗುಂಡಿ ಮುಚ್ಚುವ ವಿಚಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು.
ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಮಸ್ಯೆ ಆಗುತ್ತಿದೆ. ಈ ಪೈಕಿ ಮಳೆ ಬೀಳುವ ಸಮಯದಲ್ಲಿ ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಗುಂಡಿಗಳನ್ನು ಯಾವ ರೀತಿ ಮುಚ್ಚಬೇಕು ಎಂಬುದರ ಕುರಿತು ಈಗಾಗಲೇ ತರಬೇತಿ ಮೂಲಕ ಮಾಹಿತಿ ನೀಡಲಾಗಿದ್ದು, ಆಯಾ ವಲಯಗಳಲ್ಲಿ ಯೋಜನೆ ರೂಪಿಸಿಕೊಂಡು ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಅಗತ್ಯವಿರುವ ಕಡೆ ಜೆಟ್ ಪ್ಯಾಚರ್‌ಯಂತ್ರ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚಿಸಿದರು.
ಪ್ರಮಾಣಿತ ಕಾರ್ಯಾಚರಣೆ ವಿಧಾನ ಪ್ರಕಾರ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕು. ಈ ಸಂಬಂಧ ಗುಣನಿಯಂತ್ರಣ ವಿಭಾಗದಿಂದ ಗುಣಮಟ್ಟ ಪರಿಶೀಲನೆ ಮಾಡಬೇಕು. ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ರಸ್ತೆ ಗುಂಡಿಗಳನ್ನು ಮುಚ್ಚುವ ವೇಳೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಈ ಸಂಬಂಧ ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸೂಚಿಸಿದರು.
ನಗರದಾದ್ಯಂತ ಸ್ವಚ್ಛತಾ ಕಾರ್ಯ ಪರಿಣಾಮಕಾರಿಯಾಗಿ ನಡೆಸಲು ಆಯಾ ವಲಯಗಳಲ್ಲಿ ವಾರ್ಡ್‌ವಾರು ಒಂದು ವಾರದ ಸ್ವಚ್ಛತೆ ಮಾಡುವ ಸ್ಥಳಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕು. ಆ ವೇಳಾಪಟ್ಟಿಯ ಅನುಸಾರ ಶಿಲ್ಪಿ ಆ್ಯಂಡ್ ಟ್ರ್ಯಾಕ್ಟರ್‌ಗಳ ಮೂಲಕ ಪಾದಚಾರಿ ಮಾರ್ಗ ಸ್ವಚ್ಛತೆ, ತ್ಯಾಜ್ಯ, ಕಟ್ಟಡ ಭಗ್ನಾವಶೇಷ ತೆರವು ಕಾರ್ಯವನ್ನು ಪ್ರಾರಂಭಿಸಲು ಸೂಚಿಸಿದರು.
ಕಾರ್ಯಾಗಾರದ ಸಂದರ್ಭದಲ್ಲಿ ಗುಂಡಿಗಳನ್ನು ತುಂಬುವ SOP ಕುರಿತು ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಅನುಸರಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಎಲ್ಲಾ ಎಂಜಿನಿಯರ್‌ಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು. ಧೂಳು ಸ್ವಚ್ಛಗೊಳಿಸಿ, ಸ್ಟೇ ಮಾಡಿ, ಗುಂಡಿಗಳನ್ನು ಮುಚ್ಚಲು ಸೂಚಿಸಿದರು.
'ರಸ್ತೆ ಕಾಮಗಾರಿಯನ್ನು ತ್ವರಿತಗೊಳಿಸಿ'
ಬೆಂಗಳೂರು: ಜಕ್ಕೂರು ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ರಾಜಕಾಲುವೆ ಬಫರ್‌ವಲಯದಲ್ಲಿ ತ್ವರಿತವಾಗಿ ರಸ್ತೆ ನಿರ್ಮಿಸುವಂತೆ ಬಿಬಿಎಂಪಿ ಆಯುಕ್ತ ಮಹೇಶ್ವರ್‌ರಾವ್ ಸೂಚಿಸಿದರು.
ಮಂಗಳವಾರ ಯಲಹಂಕ ವಲಯ ವ್ಯಾಪ್ತಿ ಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಯಲಹಂಕ ವಲಯದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾದು ಹೋಗಲಿದ್ದು, ಅದಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಗಳನ್ನು ನಿರ್ಮಿಸುವ ಸಲುವಾಗಿ ಕ್ರಮ ವಹಿಸಬೇಕಿದೆ ಎಂದು ಹೇಳಿದರು.
ಯಲಹಂಕ ಕೋಗಿಲು ಜಂಕ್ಷನ್ ನಿಂದ ಜಕ್ಕೂರು ಕೆರೆವರೆಗೆ ಹೊಸದಾಗಿ ಸುಮಾರು 15 ಮೀಟರ್‌ಅಗಲದ ರಾಜಕಾಲುವೆ ಹಾಗೂ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕೆ ಜಕ್ಕೂರು ರಸ್ತೆಯಿಂದ ಜಲಮಂಡಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಮೂಲಕ ಸಂಪರ್ಕ ಕಲ್ಪಿಸುವ ಸಲುವಾಗಿ ಪರಿಶೀಲಿಸಲು ಸೂಚಿಸಿದರು.
GVK ಹಾಸ್ಟೆಲ್ ಸೈಟ್ ಮೂಲಕ ರಸ್ತೆ ನಿರ್ಮಿಸುವ ಬಗ್ಗೆ ಅಧ್ಯಯನ ನಡೆಸುವುದು, ರೈತ ಸಂತೆ ರಸ್ತೆಯ ಬಳಿ ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸುವುದು, ನಿಯಮಿತವಾಗಿ ಕಸವನ್ನು ತೆರವುಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರೈತರ ಸಂತೆ ರಸ್ತೆಯಲ್ಲಿ 2.5 ಕಿ.ಮೀ. ಉದ್ದದ ವೈಟ್-ಟಾಪಿಂಗ್ ಕೆಲಸ ಮತ್ತು ಜಕ್ಕೂರು ಬಳಿ ರೈಲ್ವೇ ಮೇಲೇತುವೆ ಕಾಮಗಾರಿ ನಡೆಯುತ್ತಿದ್ದು, ಎರಡೂ ಬದಿ ಕ್ಯಾಂಪ್ ಕಾಮ ಗಾರಿ ಆಗಬೇಕು. ಕ್ಯಾಂಪ್ ಕಾಮಗಾರಿ ಕೈಗೆತ್ತಿಕೊಂಡು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ