
ಶಿವಮೊಗ್ಗ: ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಸ್ತಾವಿತ 2,000 ಮೆಗಾವ್ಯಾಟ್ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಸುಮಾರು 10,000 ಮರಗಳಿಗೆ ಕೊಡಲಿ ಏಟು ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ಎಂಎಲ್‌ಸಿ ಡಾ. ಧನಂಜಯ ಸರ್ಜಿ ಅವರ ಪ್ರಶ್ನೆಗೆ ಉತ್ತರಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಈ ಯೋಜನೆಯನ್ನು ಅಂದಾಜು 10,240 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದ್ದರು.
ಈ ಯೋಜನೆಯು ದಿನಕ್ಕೆ ಸರಾಸರಿ 12 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಸಂಗ್ರಹಿಸುತ್ತದೆ. ಆದರೆ, ಅರಣ್ಯ ಪ್ರದೇಶಕ್ಕೆ ತಾತ್ಕಾಲಿಕ ಸಮಸ್ಯೆಗಳು ಎದುರಾಗಿದೆ ಎಂದೂ ಸಚಿವರು ತಿಳಿಸಿದ್ದರು. ಇದೇ ವೇಳೆ ಪರಿಣಾಮ ಸೀಮಿತವಾಗಿರಲಿದೆ ಎಂದು ಸಮರ್ಥಿಸಿಕೊಂಡಿದ್ದರು.
ಈ ವ್ಯವಸ್ಥೆಯು ಹೆಚ್ಚುವರಿ ವಿದ್ಯುತ್ ಅನ್ನು ಸಂಗ್ರಹಿಸಲು ಮತ್ತು ಬೇಡಿಕೆ ಹೆಚ್ಚಾದಾಗ ವಿದ್ಯುತ್ ಪೂರೈಸಲು ಅವಕಾಶ ನೀಡುತ್ತದೆ. ಈ ಯೋಜನೆಯು ಅಸ್ತಿತ್ವದಲ್ಲಿರುವ ತಲಕಲಲೆ ಅಣೆಕಟ್ಟನ್ನು ಮೇಲ್ಭಾಗದ ಜಲಾಶಯವಾಗಿ ಮತ್ತು ಶರಾವತಿ ಕಣಿವೆಯಲ್ಲಿರುವ ಗೇರುಸೊಪ್ಪ ಅಣೆಕಟ್ಟನ್ನು ಕೆಳ ಜಲಾಶಯವಾಗಿ ಬಳಸುತ್ತದೆ. ಕೇಂದ್ರ ವಿದ್ಯುತ್ ಪ್ರಾಧಿಕಾರವು ಕಳೆದ ವರ್ಷ ವಿವರವಾದ ಯೋಜನಾ ವರದಿಗೆ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಯೋಜನೆಯ ನಂತರ, 54.15 ಹೆಕ್ಟೇರ್ ಕಂದಾಯ ಭೂಮಿಯನ್ನು ಅರಣ್ಯೀಕರಣಕ್ಕಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು.
ಅರಣ್ಯ ಇಲಾಖೆ ಸೂಚಿಸಿದಂತೆ ಹಸಿರೀಕರಣ ಮತ್ತು ಕಾರಿಡಾರ್‌ಗಳನ್ನು ರಚಿಸುವ ಸಮಯದಲ್ಲಿ ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ರಕ್ಷಿಸಲಾಗುವುದು ಎಂದು ಹೇಳಿದರು.
ಈ ಯೋಜನೆಗೆ 54.15 ಹೆಕ್ಟೇರ್ ಅರಣ್ಯ ಭೂಮಿ ಮತ್ತು 46.49 ಹೆಕ್ಟೇರ್ ಅರಣ್ಯೇತರ ಭೂಮಿ ಸೇರಿದಂತೆ 100.64 ಹೆಕ್ಟೇರ್ ಭೂಮಿಯ ಅಗತ್ಯವಿದೆ. ಈ ಯೋಜನೆಯು ನದಿಯ ಹರಿವನ್ನು ಬದಲಾಯಿಸುವುದಿಲ್ಲ. ಕಚೇರಿಗಳು ಮತ್ತು ರಸ್ತೆಗಳಂತಹ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳಿಗೂ ತೊಂದರೆಯಾಗುವುದಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸಾರ್ವಜನಿಕ ಸಭೆ ನಿಗದಿಪಡಿಸಿದ್ದು, ಸೆಪ್ಟೆಂಬರ್ 16 ರಂದು ಶಿವಮೊಗ್ಗದಲ್ಲಿ ಮತ್ತು ಸೆಪ್ಟೆಂಬರ್ 18 ರಂದು ಉತ್ತರ ಕನ್ನಡದಲ್ಲಿ ಈ ಸಭೆ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.
Advertisement