
ಬೆಂಗಳೂರು: ರಾಜ್ಯ ರಾಜಧಾನಿ ರಸ್ತೆಗಳು ಗುಂಡಿಮಯಗೊಂಡಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ನಡುವೆ ಸಮಸ್ಯೆ ದೂರಾಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಎಲ್ಲಾ ನಾಗರೀಕ ಸಂಸ್ಥೆಗಳನ್ನು ಒಟ್ಟುಗೂಡಿಸಲು ಆಂತರಿಕ ಸಾಫ್ಟ್'ವೇರ್'ವೊಂದನ್ನು ಅಭಿವೃದ್ಧಿಪಡಿಸಿದೆ.
ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ ಮೇರೆಗೆ, ಬಿಬಿಎಂಪಿ ರಸ್ತೆ ಮೂಲಸೌಕರ್ಯ ಇಲಾಖೆಯು ಅಧಿಕಾರಿಗಳು ಮತ್ತು ಇತರ ಸಂಸ್ಥೆಗಳನ್ನು ಒಂದೇ ಮುಖಪುಟದಡಿಯಲ್ಲಿ ತಂದು, ಗುಂಡಿಗಳ ಮೇಲ್ವಿಚಾರಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳಲು ಈ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಾದ್ಯಂತ 3,000 ಕ್ಕೂ ಹೆಚ್ಚು ಗುಂಡಿಗಳಿದ್ದು, ವಾಹನ ಚಾಲಕರ ಸುರಕ್ಷತೆ ಮತ್ತು ಸುಗಮ ಸಂಚಾರದ ಮೇಲೆ ಅವುಗಳ ಪರಿಣಾಮವನ್ನು ಗುರುತಿಸಿ ಬೆಂಗಳೂರು ಸಂಚಾರ ಪೊಲೀಸರು ವರದಿ ಸಲ್ಲಿಸಿದ್ದರು. ಈ ವರದಿಯ ಬೆನ್ನಲ್ಲೇ ಪಾಲಿಕೆ ಈ ಕ್ರಮ ಕೈಗೊಂಡಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ನಿಂದ ಹಿಡಿದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ), ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆಆರ್‌ಡಿಸಿಎಲ್) ವರೆಗೆ ಪ್ರತಿಯೊಂದು ಏಜೆನ್ಸಿಯೂ ಗುಂಡಿಗಳನ್ನು ಸರಿಪಡಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ವರದಿ ಮಾಡುವ ಆಯ್ಕೆಯನ್ನು ಸಾಫ್ಟ್ ವೇರ್ ಮೂಲಕ ಒದಗಿಸಲಾಗಿದೆ.
ತಮ್ಮ ಸೇವೆಗಾಗಿ ರಸ್ತೆಗಳನ್ನು ಅಗೆದು ಅವುಗಳನ್ನು ಮತ್ತೆ ಸರಿಪಡಿಸುವ ಸಂಸ್ಥೆಗಳು ಕೆಲಸ ಪೂರ್ಣಗೊಂಡ ನಂತರ ಫೋಟೋವನ್ನು ಸ್ಥಳದ ವಿವರಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ಇಲಾಖೆಯ ಮುಖ್ಯ ಎಂಜಿನಿಯರ್ ರಾಘವೇಂದ್ರ ಪ್ರಸಾದ್ ಅವರು ಹೇಳಿದ್ದಾರೆ.
ತಮ್ಮ ಸೇವೆಗಾಗಿ ರಸ್ತೆಗಳನ್ನು ಅಗೆದು ಅವುಗಳನ್ನು ಮತ್ತೆ ಸರಿಪಡಿಸುವ ಸಂಸ್ಥೆಗಳು ಈ ಕುರಿತ ಫೋಟೋವನ್ನು ಸ್ಥಳದ ವಿವರಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. ಬಳಿಕ ಅದನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಒಂದೇ ಕ್ಲಿಕ್‌ನಲ್ಲಿ ಪರಿಶೀಲಿಸುತ್ತದೆ.
ವೆಬ್‌ಸೈಟ್‌ನಲ್ಲಿ ಸರಿಪಡಿಸಲಾದ ಗುಂಡಿಗಳನ್ನು ಹಸಿರು ಬಣ್ಣದಲ್ಲಿ ತೋರಿಸಲಾಗುವುದು ಮತ್ತು ಸರಿಪಡಿಸಬೇಕಾದವುಗಳು ಹಳದಿ ಬಣ್ಣದಲ್ಲಿರುತ್ತವೆ. ಇದರಂತೆ ಒಟ್ಟಾರೆಯಾಗಿ, ಆಗಸ್ಟ್ 24 ರ ವೇಳೆಗೆ 3,870ರ ಪೈಕಿ 1,112 (29%) ಗುಂಡಿಗಳನ್ನು ವಿವಿಧ ಸಂಸ್ಥೆಗಳು ಸರಿಪಡಿಸಿವೆ. ಉಳಿದ ಗುಂಡಿಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರಸ್ತೆ ಮೂಲಸೌಕರ್ಯ ಇಲಾಖೆಯು 2,498 ಗುಂಡಿಗಳನ್ನು ಸರಿಪಡಿಸಬೇಕಾದರೆ, ವಲಯ ಕಚೇರಿಗಳು 959 ಗುಂಡಿಗಳನ್ನು ಸರಿಪಡಿಸುವ ಗುರಿಯನ್ನು ಹೊಂದಿವೆ ಎಂದು ಹಿರಿಯ ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದ್ದಾರೆ.
Advertisement