
ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಆರಂಭಗೊಂಡಿರುವ ನಮ್ಮ ಮೆಟ್ರೋ ಹಳದಿ ಮಾರ್ಗ ರಾಗಿಗುಡ್ಡ ನಿಲ್ದಾಣದಲ್ಲಿ ಸಂಭಾವ್ಯ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಹಳದಿ ಮಾರ್ಗದ ರಾಗಿಗುಡ್ಡ ನಿಲ್ದಾಣದಲ್ಲಿ ಬೆಂಗಳೂರು ಮೆಟ್ರೋದ ಭದ್ರತಾ ಸಿಬ್ಬಂದಿಯೊಬ್ಬರು ಆಕಸ್ಮಿಕವಾಗಿ ರೈಲು ಹಳಿಗಳ ಮೇಲೆ ಬಿದ್ದಿದ್ದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಅಂದರೆ ಆಗಸ್ಟ್ 25 ರಂದು ಬೆಳಿಗ್ಗೆ 11.10 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಿಲ್ದಾಣ ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಗಾರ್ಡ್ ನೆರವಿಗೆ ಬಂದ ಪ್ರಯಾಣಿಕರು
ಗಾರ್ಡ್ ಹಳಿ ಮೇಲೆ ಬಿದ್ದ ಕೂಡಲೇ ಸ್ಥಳದಲ್ಲೇ ಇದ್ದ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಗಾರ್ಡ್ ಅನ್ನು ಮೇಲಕ್ಕೆತ್ತಿದ್ದಾರೆ. ಗಾರ್ಡ್ ಹಳಿ ಮೇಲೆ ಬೀಳುತ್ತಿದ್ದಂತೆಯೇ ಕೈ ನೀಡಿದ ಪ್ರಯಾಣಿಕರು ಅವರನ್ನು ಮೇಲಕ್ಕೆತ್ತಿದ್ದಾರೆ.
ಬಿಎಂಆರ್ ಸಿಎಲ್ ಸ್ಪಷ್ಟನೆ
ಈ ಘಟನೆ ಕುರಿತು ಬಿಎಂಆರ್ ಸಿಎಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 'ಗಾರ್ಡ್ ಪ್ಲಾಟ್‌ಫಾರ್ಮ್ ಸಂಖ್ಯೆ 2ರಲ್ಲಿ ಕರ್ತವ್ಯದಲ್ಲಿದ್ದಾಗ ಜಾರಿಬಿದ್ದಿದ್ದು, ಕೂಡಲೇ ಎಚ್ಚೆತ್ತ ಸಹ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಕರ್ತವ್ಯದಲ್ಲಿದ್ದ ಮತ್ತೊಬ್ಬ ಭದ್ರತಾ ಸಿಬ್ಬಂದಿ ತಕ್ಷಣ ತುರ್ತು ಟ್ರಿಪ್ ಸ್ವಿಚ್ (ಇಟಿಎಸ್) ಅನ್ನು ಸಕ್ರಿಯಗೊಳಿಸಿದರು. ಹಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಬಿದ್ದ ಗಾರ್ಡ್ ಅನ್ನು ಮತ್ತೆ ಪ್ಲಾಟ್‌ಫಾರ್ಮ್‌ಗೆ ಎಳೆಯಲು ಸಹಾಯ ಮಾಡಲು ಒಬ್ಬ ಪ್ರಯಾಣಿಕ ಕೂಡ ಮುಂದೆ ಧಾವಿಸಿದರು. 52 ವರ್ಷದ ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.
ಅಂತೆಯೇ ಈ ಮಾರ್ಗದ ಹಳಿಯಲ್ಲಿ ಬರುತ್ತಿದ್ದ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಸುರಕ್ಷತಾ ಕ್ರಮವಾಗಿ ಸುಮಾರು ಆರು ನಿಮಿಷಗಳ ಕಾಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಎಂದು ಹೇಳಿದೆ.
"ಗಾರ್ಡ್ ಸುಮಾರು 16 ಗಂಟೆಗಳ ಕಾಲ ಕರ್ತವ್ಯದಲ್ಲಿದ್ದರು. ಸ್ವಲ್ಪ ವಿಶ್ರಾಂತಿ ಪಡೆದು ಕೆಲಸಕ್ಕೆ ಮರಳಿದರು. ಘಟನೆಯ ನಂತರ, ಗಾರ್ಡ್ ಅನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು. ಗಾರ್ಡ್ ಗಳಿಗೆ ಅಂತಹ ವಿಸ್ತೃತ ಶಿಫ್ಟ್‌ಗಳನ್ನು ಹೇಗೆ ಅನುಮತಿಸಲಾಗಿದೆ ಎಂಬುದನ್ನು ನಿರ್ಧರಿಸಲು ಆಂತರಿಕ ವಿಚಾರಣೆಯನ್ನು ಸಹ ಪ್ರಾರಂಭಿಸಲಾಗಿದೆ. ಈ ವಿಷಯದ ಬಗ್ಗೆ ನಿಲ್ದಾಣ ವ್ಯವಸ್ಥಾಪಕರನ್ನು ಸಹ ಪ್ರಶ್ನಿಸಲಾಗಿದೆ ಎಂದು ಬಿಎಂಆರ್ ಸಿಎಲ್ ಮೂಲಗಳು ತಿಳಿಸಿವೆ.
Advertisement